ಚಂಡಿಗಢ: ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್ ವೇನಲ್ಲಿ ನಡೆದ ಭೀಕರ ಅಗ್ನಿ ಅವಘಡದಲ್ಲಿ 9 ಮಂದಿ ಭಕ್ತರು ಸಜೀವ ದಹನವಾಗಿರುವ ಘಟನೆ ಶನಿವಾರ ನಸುಕಿನ ಜಾವದಲ್ಲಿ ನಡೆದಿದೆ.
9 ಮಂದಿ ಭಕ್ತರು ಸಜೀವ ದಹನ ಹೊಂದಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಮಥುರಾ ಮತ್ತು ವೃಂದಾವನಕ್ಕೆ ತೀರ್ಥಯಾತ್ರೆಯಿಂದ ಕೈಗೊಂಡು ಹಿಂದಿರುಗುತ್ತಿದ್ದಾಗ ನುಹ್ ಪ್ರದೇಶದ ಬಳಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಭಕ್ತರು ಸುಟ್ಟು ಕರಕಲಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಬಸ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ಪಂಜಾಬ್ ಮೂಲದವರು ಎಂದು ತಿಳಿದುಬಂದಿದೆ.
ನಾವು 10 ದಿನಗಳ ಕಾಲ ಪವಿತ್ರ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಂಡಿದ್ದು, ಅದಕ್ಕಾಗಿ ಬಾಡಿಗೆ ಬಸ್ ಪಡೆದಿದ್ದವು. ಶನಿವಾರ ನಸುಕಿನ ಜಾವ 1.30ರ ಸುಮಾರಿಗೆ ಮನೆಗೆ ಮರಳುತ್ತಿದ್ದ ವೇಳೆ ಬಸ್‌ನ ಹಿಂಭಾಗದಲ್ಲಿ ಬೆಂಕಿಯ ಕಿಡಿ ಹತ್ತಿಕೊಂಡಿರುವುದು ಗಮನಿಸಿ ಚಾಲಕನನ್ನು ಎಚ್ಚರಿಸಲು ಪ್ರಯತ್ನಿಸಿದ್ದೆವು. ಆದರೆ ಅಷ್ಟರಲ್ಲಿ ಅವಘಡ ಸಂಭವಿಸಿತು ಎಂದು ಬದುಕುಳಿದವರು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಬೆಂಕಿಯನ್ನು ನೋಡಿದ ಬೈಕ್ ಸವಾರನೊಬ್ಬ ಬಸ್ ಅನ್ನು ಹಿಂಬಾಲಿಸಿ ನಿಲ್ಲಿಸಲು ಚಾಲಕನಿಗೆ ಎಚ್ಚರಿಕೆ ನೀಡಿದ್ದ. ಬಳಿಕ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಬಸ್‌ನ ಮುಂಭಾಗದಲ್ಲಿದ್ದ ಹಲವರನ್ನು ರಕ್ಷಿಸಲಾಯಿತು. ಬೆಂಕಿ ಕಾಣಿಸಿಕೊಳ್ಳಲಿರುವ ಕಾರಣ ಇನ್ನೂ ಪತ್ತೆಯಾಗಿಲ್ಲ. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಬಸ್ ಸಂಪೂರ್ಣ ಸುಟ್ಟು ಕರಕಲಾದ 3 ಗಂಟೆಗಳ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಿಮಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.