ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಪ್ಲೇಆಫ್ಗೆ ಲಗ್ಗೆ ಇಟ್ಟಿದೆ.
ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಕೊನೆಯ ಓವರ್ನಲ್ಲಿ ನಡೆದ ರೋಚಕ ಕದನದಲ್ಲು ಗೆಲುವು ಆರ್ಸಿಬಿ ಪಾಲಾಯಿತು. ಕೊನೆಯ ಓವರ್ನಲ್ಲಿ ಧೋನಿ ಹೊಡೆದ 110 ಮೀಟರ್ ಸಿಕ್ಸ್ ಆರ್ಸಿಬಿಗೆ ವರವಾಗಿ ಪರಿಣಮಿಸಿತು.
ಪ್ಲೇಆಫ್ಗೆ ಪ್ರವೇಶಿಸಲು ಕೊನೆಯ ಓವರ್ನಲ್ಲಿ ಸಿಎಸ್ಕೆ 17 ರನ್ಗಳ ಅವಶ್ಯಕತೆ ಇತ್ತು. ಯಶ್ ದಯಾಳ್ ಅವರ ಮೊದಲ ಎಸೆತವನ್ನು ಧೋನಿ ಮೈದಾನದ ಆಚೆಗೆ ಸಿಕ್ಸರ್ಗೆ ಅಟ್ಟಿದರು. ಈ ವೇಳೆ ಸಿಎಸ್ಕೆ ಗೆಲುವು ಖಚಿತ ಎಂದೇ ಭಾವಿಸಲಾಗಿತ್ತು.
ಆದರೆ ಅದೇ ಸಿಕ್ಸರ್ ಸಿಎಸ್ಕೆಗೆ ದುಬಾರಿಯಾಯಿತು. ಧೋನಿ ಅಟ್ಟಿದ ಸಿಕ್ಸರ್ ಮೈದಾನದ ಆಚೆಗೆ ಹೋಗಿದ್ದರಿಂದ ಅಷ್ಟೇ ಹಳತಾದ ಮತ್ತೊಂದು ಬಾಲ್ ತೆಗೆದುಕೊಳ್ಳಲಾಯಿತು. ಮುಂದಿನ ಎಸೆತವನ್ನು ಸಿಕ್ಸರ್ಗೆ ಅಟ್ಟುವ ಧೋನಿ ಪ್ರಯತ್ನ ವಿಫಲವಾಗಿ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕದ ಎಸೆತಗಳಲ್ಲಿ ಸಿಎಸ್ಕೆ ತಂಡಕ್ಕೆ ನಿರೀಕ್ಷಿತ ರನ್ ಬರಲಿಲ್ಲ.
ಮತ್ತೊಂದು ಬಾಲ್ ತೆಗೆದುಕೊಂಡಿದ್ದೇ ಪಂದ್ಯದ ತಿರುವು ಎನ್ನುವುದು ಹಲವರ ವಿಶ್ಲೇಷಣೆ. ಇದನ್ನೇ ಡ್ರೆಸಿಂಗ್ ರೂಮ್ ಭಾಷಣದಲ್ಲಿ ದಿನೇಶ್ ಕಾರ್ತಿಕ್ ಕೂಡ ಉಲ್ಲೇಖಿಸಿದರು. ಮಳೆ ಬಂದಿದ್ದರಿಂದ ಚೆಂಡು ಒದ್ದೆಯಾಗಿತ್ತು. ಇದೇ ಚೆಂಡನ್ನು ಧೋನಿ ಮೈದಾನದ ಹೊರಗೆ ಬಾರಿಸಿದರು. ಹೊಸ ಬಾಲ್ (ಇಷ್ಟೇ ಓವರ್ ಹಳತಾದ) ತೆಗೆದುಕೊಳ್ಳಲಾಯಿತು. ಇದರಿಂದ ಬೌಲರ್ಗೆ ಚೆಂಡಿನ ಮೇಲೆ ಹಿಡಿತ ಸಿಗುವಂತಾಯಿತು. ಬ್ಯಾಟರ್ಗಳಿಗೆ ಕಷ್ಟವಾಯಿತು.
‘ಇಂದು ನಡೆದ ಅತ್ಯುತ್ತಮ ವಿಷಯವೆಂದರೆ ಧೋನಿ ಮೈದಾನದ ಹೊರಗೆ ಸಿಕ್ಸರ್ ಬಾರಿಸಿದ್ದು. ನಮಗೆ ಹೊಸ ಚೆಂಡು ಸಿಕ್ಕಿತು. ಉತ್ತಮವಾಗಿ ಬೌಲಿಂಗ್ ಮಾಡಲು ಸಾಧ್ಯವಾಯಿತು’ ಎಂದು ಕಾರ್ತಿಕ್ ಡ್ರೆಸಿಂಗ್ ರೂಂ ಭಾಷಣದಲ್ಲಿ ಹೇಳಿದ್ದರು.