ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ-2024 ರ ಮತ ಎಣಿಕಾ ಕಾರ್ಯವು ಜೂನ್ 4 ರಂದು ಉಡುಪಿಯ ಅಜ್ಜರಕಾಡು ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿರುವ ಹಿನ್ನೆಲೆ, ಅಂದು ಬೆಳಗ್ಗೆ 5 ಗಂಟೆಯಿಂದ ಮತ ಎಣಿಕೆ ಮುಗಿಯುವ ವರೆಗೆ ಸದ್ರಿ ರಸ್ತೆಯಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ಈ ಕೆಳಗಿನಂತೆ ಮಾರ್ಪಾಡುಗಳನ್ನು ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.
ಜೂನ್ 4 ರಂದು ಬ್ರಹ್ಮಗಿರಿ ಜಂಕ್ಷನ್‌ನಿಂದ ನಾಯಕ್ ಕ್ಯಾಂಟೀನ್ ವರೆಗಿನ ಮತ್ತು ಅಜ್ಜರಕಾಡು ಜಂಕ್ಷನ್‌ನಿಂದ ಸುದರ್ಶನ್ ರೆಸಿಡೆನ್ಸಿ ವರೆಗಿನ ರಸ್ತೆಯಲ್ಲಿ ಸಂಚಾರ ನಿಷೇಧಿಸಿದ್ದು, ಬದಲಿ ಮಾರ್ಗದಲ್ಲಿ ಸಂಚರಿಸಬೇಕು.
ಮತ ಎಣಿಕೆಯ ಸಂಬಂಧ ಸರಕಾರಿ ಅಧಿಕಾರಿಗಳ ವಾಹನಗಳ ಪಾರ್ಕಿಂಗ್ ದೃಷ್ಠಿಯಿಂದ ಜೂನ್ 4 ರಂದು ಬ್ರಹ್ಮಗಿರಿ ಜಂಕ್ಷನ್‌ನಿಂದ ಅಜ್ಜರಕಾಡು ಜಂಕ್ಷನ್ ವರೆಗಿನ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ ಹಾಗೂ ಅಜ್ಜರಕಾಡು ಜಂಕ್ಷನ್‌ನಿಂದ ಬ್ರಹ್ಮಗಿರಿ ಜಂಕ್ಷನ್ ವರೆಗಿನ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಬದಲಾಯಿಸಿದೆ.
ಈ ಅಧಿಸೂಚನೆಯನ್ನು ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ನಿಯಮ 1989 ರ ನಿಯಮ 221 (5)(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಈ ಆದೇಶವನ್ನು ಹೊರಡಿಸಿರುತ್ತಾರೆ.