ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಭಾರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಆದರೆ ಈ ಸಮೀಕ್ಷಾ ಫಲಿತಾಂಶಗಳನ್ನು ತಿರಸ್ಕರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇವು ಪ್ರಧಾನಿ ನರೇಂದ್ರ ಮೋದಿ ಅವರ ‘ಫ್ಯಾಂಟಸಿ ಪೋಲ್’ ಎಂದು ಲೇವಡಿ ಮಾಡಿದ್ದಾರೆ. ಇದು ಎಕ್ಸಿಟ್ ಪೋಲ್ ಅಲ್ಲ. ಮೋದಿ ಮಾಧ್ಯಮ ಪೋಲ್ ಎಂದು ಅವರು ಟೀಕಿಸಿದ್ದಾರೆ.
ಜೂನ್ 4ರಂದು ಪ್ರಕಟವಾಗಲಿರುವ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಐಎನ್‌ಡಿಐಎ ಬ್ಲಾಕ್ ಎಷ್ಟು ಸೀಟುಗಳಲ್ಲಿ ಗೆಲ್ಲಬಹುದು ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ, ಹತ್ಯೆಯಾಗಿರುವ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹಾಡೊಂದನ್ನು ಉಲ್ಲೇಖಿಸಿದ್ದಾರೆ. 543 ಲೋಕಸಭಾ ಸ್ಥಾನಗಳ ಪೈಕಿ, ವಿರೋಧ ಪಕ್ಷಗಳ ಮೈತ್ರಿಕೂಟವು 295 ಸೀಟುಗಳನ್ನು ಗೆಲ್ಲಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
“ನೀವು ಸಿಧು ಮೂಸೆವಾಲಾ ಅವರ 295 ಹಾಡನ್ನು ಕೇಳಿದ್ದೀರಾ? 295 ಸೀಟು” ಎಂದು ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ಟೆಲಿವಿಷನ್ ವಾಹಿನಿಗಳ ಮತಗಟ್ಟೆ ಸಮೀಕ್ಷೆ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, “ಇದು ಚುನಾವಣೋತ್ತರ ಸಮೀಕ್ಷೆ ಅಲ್ಲ. ಇದು ಮೋದಿ ಮಾಧ್ಯಮ ಸಮೀಕ್ಷೆ. ಇದು ಅವರ ಭ್ರಮೆಯ ಸಮೀಕ್ಷೆ” ಎಂದು ಹೇಳಿದ್ದಾರೆ.
ಎಲ್ಲ ಎಕ್ಸಿಟ್ ಪೋಲ್ ಸಮೀಕ್ಷೆಗಳೂ ಬಿಜೆಪಿ ನೇತೃತ್ವದ ಎನ್‌ಡಿಎಗೆ ಭರ್ಜರಿ ಗೆಲುವು ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಮತದಾನೋತ್ತರ ಸಮೀಕ್ಷೆಗಳಲ್ಲಿ ಪರಿಣತರಾಗಿರುವ ಟುಡೇಸ್ ಚಾಣಕ್ಯ ಮತ್ತು ಆಕ್ಸಿಸ್ ಮೈ ಇಂಡಿಯಾ ಸಂಸ್ಥೆಗಳಂತೂ ಎನ್‌ಡಿಎಗೆ 400 ಸೀಟುಗಳನ್ನು ನೀಡುವ ಮೂಲಕ, ಬಿಜೆಪಿಯ ‘ಚಾರ್ ಸೋ ಪಾರ್’ ಘೋಷಣೆ ನಿಜವಾಗಲಿದೆ ಎಂದು ಹೇಳಿವೆ. ಆದರೆ ಈ ಸಮೀಕ್ಷೆಗಳು ಎಷ್ಟು ಸತ್ಯವಾಗಲಿದೆ ಎನ್ನುವುದಕ್ಕೆ ಮಂಗಳವಾರ ಉತ್ತರ ಸಿಗಲಿದೆ.