ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ.
ಇಂದು ಬೆಳಗಿನ ಜಾವ ಮೈಸೂರಿನ ಫಾರ್ಮ್ ಹೌಸ್ನಲ್ಲಿದ್ದ ದರ್ಶನ್ ಬಂಧನವಾಗಿದೆ. ದರ್ಶನ್ ಜೊತೆಯಲ್ಲಿ ಇಬ್ಬರು ಬಾಡಿಗಾರ್ಡ್ಗಳನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಜೂನ್ 9ರಂದು ಬೆಂಗಳೂರಿನ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು. ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.
ಘಟನೆ ಸಂಬಂಧ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಶವವನ್ನು ಮೊದಲ ಬಾರಿ ನೋಡಿದ್ದ ಅನುಗ್ರಹ ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಸೆಕ್ಯುರಿಟಿ ಗಾರ್ಡ್ ದೂರು ದಾಖಲಿಸಿದ್ದರು. ಅಪಾರ್ಟ್ಮೆಂಟ್ ಮುಂಭಾಗ ಗಸ್ತು ಮಾಡುತ್ತಿದ್ದಾಗ ಶವ ಪತ್ತೆಯಾಗಿತ್ತು.
ಬೆಂಗಳೂರಿನಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿಯಾಗಿದ್ದು, ಅಪೊಲೋ ಮೆಡಿಕಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಶನಿವಾರ ಮನೆಯಿಂದ ಹೊರಟವನು ವಾಪಸ್ ಬಂದಿರಲಿಲ್ಲ. ನಿನ್ನೆ ಬೆಂಗಳೂರು ಪೊಲೀಸರು ರೇಣುಕಾಸ್ವಾಮಿ ಶವವಾಗಿ ಪತ್ತೆ ಆಗಿರುವ ಮಾಹಿತಿಯನ್ನು ಕುಟುಂಬಸ್ಥರಿಗೆ ನೀಡಲಾಗಿತ್ತು. ಮುಖ, ತಲೆಗೆ ಮತ್ತು ಕಿವಿಗೆ ರಕ್ತದ ಗಾಯ ಆಗಿರೊದು ಕಂಡಬಂದಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕೊಲೆ ಮಾಡಿರುವ ಆಸಾಮಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸೆಕ್ಯೂಟಿ ರಿಟಿ ಗಾರ್ಡ್ ಆಗ್ರಹಿಸಿದ್ದರು.
ದರ್ಶನ್ ಬಂಧನ ಆಗಿರೋದನ್ನು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಖಚಿತಪಡಿಸಿದ್ದಾರೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆ ತಂದು ಹಲ್ಲೆ ಮಾಡಿ ಕೊಲೆಗೈಯ್ಯಲಾಗಿದೆ. ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಎಂಬಾತ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿಗೆ ಕರೆದುಕೊಂಡು ಬಂದ ಮೇಲೆ ದರ್ಶನ್ ಸೇರಿದಂತೆ ಐವರು ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ರೇಣುಕಾಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ನಂತರ ಶವವನ್ನು ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಎಸೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.