ಕಾಪು : ತಾಲೂಕಿನ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ಮತ್ತು ಕಾಪು ದ್ವೀಪಸ್ತಂಭ ಬಳಿ ಸುಮಾರು 12 ಕೋಟಿ ರೂಪಾಯಿ ವೆಚ್ಚದ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡುವ ಸಲುವಾಗಿ ಪಟ್ಟಿ ಕಳುಹಿಸಿಕೊಡುವಂತೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ..ಯೋಗೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.
ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಮತ್ತು ಕಾಪು ಬೀಚ್ಗೆ ಶನಿವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಬ್ಲೂ ಫ್ಲ್ಯಾಗ್ ಬೀಚ್ನಲ್ಲಿ ವಾಹನದಟ್ಟಣೆಯನ್ನು ಸುಸ್ಥಿತಿಗೆ ತರಲು ಎರಡು ಸೇತುವೆಗಳ ರಚನೆ ಸಹಿತವಾಗಿ ರಸ್ತೆ ವಿಸ್ತರಣೆಗಾಗಿ 10ಕೋಟಿ ರೂ. ಹಾಗೂ ಕಾಪು ಲೇಟ್ ಹೌಸ್ ಬೀಚ್ನ ಮೂಲ ಸೌಕರ್ಯ ಅಭಿವೃದ್ಧಿ ಸಹಿತ ಎರಡು ಬಂಡೆಗಳ ನಡುವೆ ಸಂಪರ್ಕ ಸೇತುವೆ ನಿರ್ಮಾಣಕ್ಕೆ 2 ಕೋಟಿ ರೂಪಾಯಿಗಳ ಪ್ರಸ್ತಾವನೆಯು ಈಗಾಗಲೇ ಪ್ರವಾಸೋದ್ಯಮ ಇಲಾಖೆಯ ಬಳಿಯಿದೆ, ಅದಕ್ಕೆ ಶೀಘ್ರವಾಗಿ ಇಲಾಖಾ ಅನುಮೋದನೆಯನ್ನು ನೀಡಲಾಗುವುದೆಂದರು.
ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಶಾಸಕ ಲಾಲಾಜಿ ಮೆಂಡನ್, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕ ಸೋಮಶೇಖರ್, ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ ನಾಯಕ್, ಕರಾವಳಿ ಪ್ರವಾಸೋದ್ಯಮ ಸಂಸ್ಥೆಯ(ಆ್ಯಕ್ಟ್)ನ ಅಧ್ಯಕ್ಷ ಮನೋಹರ ಶೆಟ್ಟಿ ಕಾಪು ಮತ್ತು ಕಾರ್ಯದರ್ಶಿ ಗೌರವ್ ಶೇಣವ, ಬ್ಲೂಫ್ಲ್ಯಾಗ್ ಬೀಚ್ ಪ್ರಬಂಧಕ ವಿಜಯ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಶಫೀ ಉಚ್ಚಿಲ