ಕುಂದಾಪುರ : ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಾ ಸಮಾಜದಲ್ಲಿ ಯಾವುದೇ ಸಂಕಷ್ಟ ಎದುರಾದಾಗ ಬೆನ್ನೆಲುಬಾಗಿ ನಿಂತು ಸಹಕಾರ ನೀಡುವ ಡಾ| ಜಿ.ಶಂಕರ್ ಅವರು 2.5ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಿಶ್ರಾಂತಿಗೃಹವನ್ನು ನಿರ್ಮಿಸಿಕೊಟ್ಟಿದ್ದಾರೆ. ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸುವ ಡಾ| ಜಿ.ಶಂಕರ್ ಅವರದ್ದು ಪುಣ್ಯದ ಕಾರ್ಯ. ದೇವಳಕ್ಕೆ ನೀಡಿರುವ ಈ ಕೊಡುಗೆ ಸದ್ವ್ವಿನಿಯೋಗವಾಗುತ್ತದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಹೇಳಿದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ., ಉಡುಪಿ ಇದರ ಪ್ರವರ್ತಕರಾದ ಡಾ| ಜಿ.ಶಂಕರ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ‘ಅಮ್ಮ’ ವಿಶ್ರಾಂತಿಗೃಹವನ್ನು ಉದ್ಘಾಟಿಸಿ, ಕೀ ಹಸ್ತಾಂತರಿಸಿ ಮಾತನಾಡಿದರು.
ಈಗಾಗಲೇ ಬಂದರುಗಳ ಅಭಿವೃದ್ದಿ ಸರ್ಕಾರ ಅನುದಾನ ಒದಗಿಸಿದೆ. ಹೆಜಮಾಡಿ ಬಂದರು 185 ಕೋಟಿ, ಗಂಗೊಳ್ಳಿ ಬಂದರಿಗೆ 16 ಕೋಟಿ, ಮರವಂತೆ ಬಂದರಿಗೆ 85 ಕೋಟಿ ಹಾಗೆಯೇ ಬೈಂದೂರು ಕ್ಷೇತ್ರದ ಮೀನುಗಾರಿಕಾ ರಸ್ತೆ ಅಭಿವೃದ್ದಿಗೆ 12 ಕೋಟಿ ಅನುದಾನ ಲಭಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಕ್ಷೇತ್ರದ ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ ವಹಿಸಿದ್ದರು.
ಡಾ|ಜಿ.ಶಂಕರ್ ಮಾತನಾಡಿ ಕೊಲ್ಲೂರಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಈ ವಿಶ್ರಾಂತಿಗೃಹವನ್ನು ನಿರ್ಮಿಸಿ ಕೊಡಲಾಗಿದೆ. ಮುಂದೆ ಇದರ ನಿರ್ವಹಣೆ ಕೂಡಾ ವ್ಯವಸ್ಥಿತವಾಗಿ ನಡೆದು ಅದು ಸದ್ವಿನಿಯೋಗಕ್ಕೆ ಬಳಕೆಯಾದ ನಾವು ನೀಡಿದ್ದಕ್ಕೆ ಸಾರ್ಥಕತೆ ಆಗುತ್ತದೆ. ಇವತ್ತು ಮೀನುಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಡಿಸೇಲ್ ಸಬ್ಸಿಡಿ, ಡೆಲಿವರಿ ಪಾಯಿಂಟ್‍ನಲ್ಲಿಯೇ ಸಿಗುವಂತಾದರೆ ಮೀನುಗಾರರಿಗೆ ಅನುಕೂಲವಾಗುತ್ತದೆ. ನಾಡದೋಣಿ ಮೀನುಗಾರರ ಬೇಡಿಕೆಗೂ ಸರ್ಕಾರ ಸ್ಪಂದಿಸಬೇಕು ಎಂದರು.
ಜಿ.ಪಂ. ಸದಸ್ಯರಾದ ಶಂಕರ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತಾಧಿಕಾರಿ ಮತ್ತು ಸಹಾಯಕ ಕಮಿಷನರ್ ಕೆ.ರಾಜು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಸ್.ಬಿ.ಮಹೇಶ್, ಕೊಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅರ್ಚಕರಾದ ರಾಮಚಂದ್ರ ಅಡಿಗ ಉಪಸ್ಥಿತರಿದ್ದರು.
ಕುಂದಾಪುರದಲ್ಲಿ ನಿರ್ಮಾಣವಾಗುತ್ತಿರುವ ಮೊಗವೀರ ಸಭಾ ಭವನಕ್ಕೆ ಸರ್ಕಾರದಿಂದ ರೂ.2 ಕೋಟಿ ಅನುದಾನ ನೀಡಿರುವ ಕುರಿತು ಸಂಸದರು ಹಾಗೂ ಶಾಸಕರನ್ನು ಕೆ.ಕೆ ಕಾಂಚನ್ ಅಭಿನಂದಿಸಿದರು. ಕೊಲ್ಲೂರು ದೇವಸ್ಥಾನದ ವತಿಯಿಂದ ಡಾ|ಜಿ.ಶಂಕರ್ ಆವರನ್ನು ಸನ್ಮಾನಿಸಲಾಯಿತು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ|ಜಿ.ಶಂಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಪ್ರಿಯಾ ಪ್ರಾರ್ಥಿಸಿದರು. ಮೊಗವೀರ ಯುವ ಸಂಘಟನೆಯ ಸಾಂಸ್ಕøತಿಕ ಕಾರ್ಯದರ್ಶಿ ಅಶೋಕ್ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಶಿವರಾಮ ಕೆ.ಎಂ ವಂದಿಸಿದರು.
ವರದಿ : ದಿನೇಶ್ ರಾಯಪ್ಪನಮಠ