ಬಾರಕೂರಿನ ಕಚ್ಚೂರು ಕಾಳಿಕಾಂಬಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಮಾಹಿತಿ ಹಕ್ಕು ಕಾರ್ಯಕರ್ತ ಶಂಕರ್ ಶಾಂತಿ ಯವರಿಗೆ ಕಾಳಿಕಾಂಬಾ ದೇವಸ್ಥಾನದೊಳಗೆ ಹಲ್ಲೆಯಾಗಿದೆ ಎನ್ನುವ ವಿಚಾರ ಹರಿದಾಡುತ್ತಿದ್ದು ಇದು ಆಧಾರರಹಿತವಾಗಿದೆ. ಈ ಘಟನೆಗೂ ದೇವಸ್ಥಾನಕೂ ಯಾವುದೇ ಸಂಬಂಧವಿಲ್ಲ, ಅನಾವಶ್ಯಕವಾಗಿ ವಿಶ್ವಕರ್ಮ ಸಮಾಜದ ಮೇಲೆ ಆರೋಪ ಮಾಡುತ್ತಿರುವುದು, ನಮ್ಮ ಸಮಾಜದ ಯುವಕರ ಮೇಲೆ ಕೇಸು ದಾಖಲಿಸಿರುವುದು ಸರಿಯಲ್ಲ ಎಂದು ದೇವಸ್ತಾನದ ಆಡಳಿತ ಮೊಕ್ತೇಸರ ವಡೇರಹೋಬಳಿ ಶ್ರೀಧರ ಆಚಾರ್ಯ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಕಲಶೋತ್ಸವದ ಸಂದರ್ಭ ರಸ್ತೆಯಲ್ಲಿ ನಮ್ಮ ಸ್ವಯಂ ಸೇವಕರು ಬ್ಯಾನರ್‍ಗಳನ್ನು ತಂದು ಇಡುತ್ತಿರುವ ಸಂದರ್ಭ ಶಂಕರ್ ಶಾಂತಿ ಎನ್ನುವವರು ಆಕ್ಷೇಪ ವ್ಯಕ್ತ ಪಡಿಸಿ, ಕಿಟಕಿ ಗಾಜುಗಳನ್ನು ಒಡೆಯುತ್ತಿರುವ ಸಂದರ್ಭ ಪ್ರವೀಣ ಆಚಾರ್ಯರು ತಡೆಯಲು ಹೋದಾಗ ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಆಗ ಶಂಕರ್ ಶಾಂತಿ ಅವರ ಹೆಂಡತಿ ಬಂದು ಅವರನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ತುಂಬಾ ಗಾಯ ಆಗಿತ್ತು ಎನ್ನುತ್ತಾರೆ. ಅದು ಸಾಧ್ಯವೇ ಇಲ್ಲ. ಆಗ ಅವರು ಸರಿಯಾಗಿಯೇ ಇದ್ದರು. ನಂತರ ದೇವಸ್ಥಾನದ ಅಡುಗೆ ಮನೆಯಲ್ಲಿ ಹೊಡೆದಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುತ್ತಿದೆ. ಇದು ಸಂಪೂರ್ಣ ಸುಳ್ಳು ಎಂದರು.
ಬ್ರಹ್ಮಕಲಶೋತ್ಸವ ಸಂದರ್ಭ ಬ್ಯಾನರ್ ಹಾಕುವಾಗಲೂ ಕೂಡಾ ಅಡ್ಡಿ ಉಂಟು ಮಾಡಿದರು. ಪೂರ್ವಗ್ರಹ ಪೀಡಿತವಾಗಿ ಶಂಕರ್ ಶಾಂತಿ ಅವರು ವರ್ತಿಸುತ್ತಿದ್ದಾರೆ.
ರಸ್ತೆಯಲ್ಲಿ ನಡೆದ ಘಟನೆಯನ್ನು ದೇವಸ್ಥಾನಕ್ಕೆ ಸಂಭಂಧ ಕಲ್ಲಿಸುವುದು ಸರಿಯಲ್ಲ. ಆ ಸಂದರ್ಭ ಸಿಸಿ ಕ್ಯಾಮರದ ಬಗ್ಗೆ ನಮ್ಮ ಗಮನವೇ ಇರಲಿಲ್ಲ. ದೇವಸ್ಥಾನದ ಜೀರ್ಣೋದ್ದಾರ ಸಂದರ್ಭ ಸಿಸಿ ಕ್ಯಾಮರಾ, ವಿದ್ಯುತ್ ಸಂಪರ್ಕವನ್ನು ತಗೆದಿದ್ದೆವು. ಅದನ್ನು ಆನ್ ಮಾಡಿರಲಿಲ್ಲ. ಕ್ಲಪ್ತ ಸಮಯದೊಳಗೆ ಪುನಃ ಪ್ರತಿಷ್ಠಾಪನೆ ಆಗಬೇಕಾದ್ದರಿಂದ ನಮಗೆ ಧಾರ್ಮಿಕ ಕಾರ್ಯಕ್ರಮಗಳೇ ಆದ್ಯತೆಯಾಗಿದ್ದವು ಎಂದರು. ಇವತ್ತು ಇತರ ಸಮಾಜದವರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವೂ ಪ್ರತಿಭಟನೆ ಮಾಡಬಹುದು. ನಾವು ಗುರುಗಳ ಮಾರ್ಗದರ್ಶನದಲ್ಲಿ ನಾವು ಮುಂದುವರಿಯುತ್ತೇವೆ. ನಮ್ಮ ದೇವಸ್ಥಾನದ ವ್ಯಾಪ್ತಿಯಲ್ಲಿ 15 ದೇವಸ್ಥಾನಗಳಿವೆ, 144 ಗ್ರಾಮ ಮೊಕ್ತೇಸರರಿದ್ದಾರೆ. 38 ಸಂಘ ಸಂಸ್ಥೆಗಳಿವೆ. ಈ ರೀತಿ ಮಾಡಿದರೆ ನಾವೂ ಕೂಡಾ ಪ್ರತಿಭಟಿಸುತ್ತೇವೆ. ನಾಳೆನೇ ಧರಣಿ ಮಾಡುತ್ತೇವೆ. ಶಂಕರ್ ಶಾಂತಿ ಹೇಗೆ ಎಂದರೆ ಇಡೀ ಬಾರಕೂರಿನವರೇ ಹೇಳುತ್ತಾರೆ. ಎಲ್ಲ ಸಮಾಜದವರು ನಮ್ಮೊಂದಿಗೆ ಬರುತ್ತಾರೆ ಎಂದರು.
ಈ ಸಂದರ್ಭದಲ್ಲಿ 3ನೇ ಮೊಕ್ತೇಸರ ರವಿ ಆಚಾರ್ಯ, ಕಾರ್ಯದರ್ಶಿ ಜನಾರ್ದನ ಆಚಾರ್ಯ, ಸದಸ್ಯರಾದ ಚಂದ್ರ ಆಚಾರ್ಯ ಕೋಟ ಉಪಸ್ಥಿತರಿದ್ದರು.
ವರದಿ : ಬಿ.ಎಸ್.ಆಚಾರ್ಯ