ಉಡುಪಿ : ಕೊಲ್ಲೂರು ದೇವಸ್ಥಾನವು ದಿನನಿತ್ಯ ಸಾವಿರಾರು ಭಕ್ತರು ಸಂದರ್ಶಿಸುವ ರಾಜ್ಯದ ಪ್ರಸಿದ್ಧ ದೇವಸ್ಥಾನವಾಗಿದೆ. ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸರಕಾರಿ ಅಧಿಕಾರಿ ಸೇರಿ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವಕ್ತಾರ ಗುರುಪ್ರಸಾದ್ ಗೌಡ ಆರೋಪಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ದೇಣಿಗೆ ರೂಪದಲ್ಲಿ ದೊರೆತ ಬಂಗಾರ ಮತ್ತು ಬೆಳ್ಳಿಯ ಬೆಲೆಬಾಳುವ ಆಭರಣಗಳ ಬಗ್ಗೆ ಆಡಳಿತ ಮಂಡಳಿಯು ನಿಯಮಾನುಸಾರ ನೋಂದಣಿ ಮಾಡಿಸಿಲ್ಲ. 2018-19 ರವರೆಗೆ ಇಂತಹ ದೇಣಿಗೆ ಸ್ವೀಕರಿಸಿದಂತಹ ಆಭರಣಗಳ ಪಟ್ಟಿಯನ್ನು ಸರಕಾರಿ ಲೆಕ್ಕ ಪರಿಶೋಧಕರಿಗೆ ಸಲ್ಲಿಸಿಯೇ ಇಲ್ಲ ಎಂದು ಆರೋಪಿಸಿದ್ದಾರೆ.
“ಆಡಳಿತ ಮಂಡಳಿಯು ಸುಳ್ಳು ಸಿಬ್ಬಂದಿಗಳನ್ನು ತೋರಿಸಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿದ್ದು, ನಿಯಮಗಳ ಪ್ರಕಾರ ದೇವಸ್ಥಾನದ ಸಿಬ್ಬಂದಿಗಳ ವಿವರ ಮತ್ತು ಮಾಹಿತಿಗಳನ್ನು ತೆಗೆದಿಡಬೇಕು. ಆದರೆ ಅದನ್ನು ಮಾಡಿಲ್ಲ ಎಂದು ದೂರಿದ್ದಾರೆ. ಹಾಗೇ ಜಮೀನು ಮತ್ತು ಇತರ ಆಸ್ತಿ ಪಾಸ್ತಿಗಳ ಕುರಿತಾದ ಮಾಹಿತಿಗಳನ್ನು ನೋಂದಾಯಿಸಿಲ್ಲ. ಜಮೀನುಗಳ ಅತಿಕ್ರಮಣವಾಗಿದೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ.