ಕಾಪು:ಕಾಪು ತಾಲೂಕಿನ ಉಚ್ಚಿಲ ಭಾಸ್ಕರ ನಗರದಲ್ಲಿ ರಾತ್ರಿ 8 ಗಂಟೆಯ ನಂತರ ಪಿಶಾಚಿಯೊಂದು ತಿರುಗಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲದಿನಗಳಿಂದ ಹರಿದಾಡುತ್ತಿರುವ ಸಂದೇಶ ಜನರ ನಿದ್ದೆಗೆಡಿಸಿರುವ ಜೊತೆಗೆ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಿಶಾಚಿ ತಲೆ ಬುರುಡೆ ಚಿತ್ರ ಸಹಿತ ಧ್ವನಿ ಸಂದೇಶವೊಂದು ಕಳೆದ ಕೆಲದಿನಗಳಿಂದ ಹರಿದಾಡುತ್ತಿದ್ದು, ರಾತ್ರಿ 8 ಗಂಟೆಯ ನಂತರ ಪಿಶಾಚಿಯೊಂದು ತಿರುಗಾಡುತ್ತಿದೆ. ಮಕ್ಕಳನ್ನು ಯಾರೂ ಹೊರಗೆ ಬಿಡಬೇಡಿ. ಇದು ಪಿಶಾಚಿಯೆ ಅಥವಾ ಯಾವುದೇ ಪ್ರಾಣಿಯೇ ಎಂಬುವುದನ್ನು ದೃಢಪಡಿಸುವಲ್ಲಿ ನಾವು ಪ್ರಯತ್ನಿಸುತ್ತಿದ್ದೇವೆ. ಎಲ್ಲರೂ ಜಾಗೃತರಾಗಿರಿ ಎಂಬ ಧ್ವನಿ ಸಂದೇಶ ಹರಿಯಬಿಡಲಾಗಿದೆ.
ಜನರಲ್ಲಿ ಭಯ ಹುಟ್ಟಿಸಲು ಯಾರೋ ಕಿಡಿಗೇಡಿಗಳು ನಡೆಸಿದ ಕೃತ್ಯವಾಗಿದ್ದು, ಪಿಶಾಚಿ ಮುಖವಾಡದ ಕಪ್ಪುಬಣ್ಣದ ಟೀ ಶರ್ಟ್ ಬಳಸಿ ಹುಲ್ಲು ಪೊದೆಯ ನಡುವೆ ಇರಿಸಿ ಪೋಟೋ ಕ್ಲಿಕ್ಕಿಸಿ ವೈರಲ್ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಸಂದೇಶಕ್ಕೆ ಪ್ರತಿಕ್ರಿಯೆಯನ್ನೂ ನೀಡುವ ಮೂಲಕ ಜನರ ಆತಂಕವನ್ನು ದೂರ ಮಾಡುವ ಪ್ರಯತ್ನವನ್ನೂ ನಡೆಸಿದ್ದಾರೆ.
ವರದಿ : ಶಫೀ ಉಚ್ಚಿಲ