ಕುಂದಾಪುರ: ಬುದ್ದಿವಂತರ ಜಿಲ್ಲೆ ಉಡುಪಿಯ ಮುಕುಟಕ್ಕೆ ಮತ್ತೊಂದು ಹಿರಿಮೆಯ ಗರಿ ಸಿಕ್ಕಿದೆ. ಇದೇ ಮೊದಲ ಬಾರಿ ಜಿಲ್ಲೆಯ ವಿದ್ಯಾರ್ಥಿನಿಯೋರ್ವಳು ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ನಡೆಸುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾಳೆ. ಕುಂದಾಪುರ ತಾಲೂಕಿನ ಅಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಹತ್ತನೆ ತರಗತಿ ಅನುಷಾ ಆಯ್ಕೆಯಾಗಿರುವ ವಿದ್ಯಾರ್ಥಿನಿ.
ದೇಶದ ನಾನಾ ಶಾಲೆಗಳಿಂದ ಈ ವರ್ಷ ಒಟ್ಟು 10 ಲಕ್ಷದ 39 ಸಾವಿರ ವಿದ್ಯಾರ್ಥಿಗಳು ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಕೇವಲ 1500 ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮ ವೀಕ್ಷಿಸಲು ಆಯ್ಕೆಯಾಗಿದ್ದು, ಆ 1500 ವಿದ್ಯಾರ್ಥಿಗಳಲ್ಲಿ ಕೇವಲ 30 ವಿದ್ಯಾರ್ಥಿಗಳು ಸನ್ಮಾನ್ಯ ಪ್ರಧಾನಿಗಳ ಜೊತೆಗೆ ಮಾತನಾಡಲಿದ್ದಾರೆ. ಅದರಲ್ಲಿ ಅಲ್ಬಾಡಿ ಶಾಲೆಯ ಅನುಷಾ ಕೂಡ ಒಬ್ಬರು ಎನ್ನುವುದು ಪ್ರಶಂಸನೀಯ.
ಕರ್ನಾಟಕದಿಂದ ಈ ಬಾರಿ ಎರಡು ಶಾಲೆ ಆಯ್ಕೆಯಾಗಿದ್ದು, ಅದರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅತ್ಯಂತ ಒಳ ಭಾಗದ ಅಲ್ಬಾಡಿ ಶಾಲೆಯ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ. ಇದೇ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿಕೊಂಡು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಪ್ರಮೋಷನಲ್ ವಿಡಿಯೋ ಮಾಡಿದ್ದು, ಅದು ಕೂಡ ಅಪಾರ ಜನಮನ್ನಣೆ ಗಳಿಸಿತ್ತು.
ದೆಹಲಿಯ ತಂಡ ಅಲ್ಬಾಡಿ ಶಾಲೆಗೆ ಆಗಮಿಸಿ ಶಾಲೆಯ ಕುರಿತು ಕಿರುಚಿತ್ರ ತಯಾರಿಸಲಿದ್ದಾರೆ. ಆ ಕಿರು ಚಿತ್ರವನ್ನು ಪ್ರಧಾನಿ ಮೋದಿಯವರು ವೀಕ್ಷಿಸಲಿದ್ದು, ಅವರ ಜೊತೆ ಜಗತ್ತೇ ಉಡುಪಿ ಜಿಲ್ಲೆಯ ಅತ್ಯಂತ ಒಳ ಭಾಗದ ಸರಕಾರಿ ಶಾಲೆಯ ಅದ್ಭುತ ಯಾತ್ರೆಯನ್ನು ವೀಕ್ಷಿಸಲಿದೆ.
ಈ ಶಾಲೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರು ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿ ಪ್ರದೇಶದ ಶಾಲೆಯಾಗಿ ದೇಶದ ರಾಜಧಾನಿ ದೆಹಲಿಯನ್ನು ಆಕರ್ಷಿಸಿಕೊಂಡ ಶಾಲೆ ಊರಿನಲ್ಲಿಯೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ. ಅಷ್ಟೇ ಅಲ್ಲದೇ ಕ್ರೀಡಾ ಕ್ಷೇತ್ರದಲ್ಲೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದವರು ಇಲ್ಲಿದ್ದಾರೆ.
1963 ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ಗ್ರಾಮದ ಅತ್ಯಂತ ಒಳ ಭಾಗದ ಅಲ್ಬಾಡಿ ಪರಿಸರದಲ್ಲಿ ದಾನಿಗಳಾದ ಚಾರಮಕ್ಕಿ ನಾರಾಯಣ ಶೆಟ್ಟಿಯವರ ಕೊಡುಗೆಯೊಂದಿಗೆ ಈ ಸರಕಾರಿ ಶಾಲೆ ಆರಂಭವಾಗಿದ್ದು, ಇಂದಿಗೂ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಸಲುವಾಗಿ ನಾರಾಯಣ ಶೆಟ್ರ ಮಕ್ಕಳು ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.
ನಮ್ಮ ಶಾಲೆಯ ಹೆಸರು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಲಿರುವ ಖುಷಿ : ಶೇಖರ ಶೆಟ್ಟಿಗಾರ್(ಮುಖ್ಯ ಶಿಕ್ಷಕರು)
ನಮ್ಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನೂಷಾ ಇವಳು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ಇಡೀ ದೇಶದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು, ನಮ್ಮ ಶಾಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಕೊಂಡೊಯ್ಯಲಿರುವುದು ಅಭಿಮಾನ ಮೂಡಿಸುವುದರೊಂದಿಗೆ ಸಂತೋಷವನ್ನು ತಂದಿದೆ. ಇದಕ್ಕೆ ಕಾರಣಕರ್ತರಾದ ನಮ್ಮ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರನ್ನು ಹಳೆ ವಿದ್ಯಾರ್ಥಿ ಸಂಘ ಗ್ರಾಮ ಪಂಚಾಯತ್ ಊರ-ಪರವೂರ ವಿದ್ಯಾಭಿಮಾನಿ ಗಳಿಗೆ ಧನ್ಯವಾದಗಳು ಸಲ್ಲಿಸುತ್ತೇನೆ.
ಸಂವಾದಕ್ಕೆ ಆಯ್ಕೆ ಆಗಿದ್ದು ಸಂತಸ ತಂದಿದೆ : ಅನುಷಾ (ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ)
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಸನ್ಮಾನ್ಯ ಪ್ರಧಾನ ಮಂತ್ರಿಗಳು ಒಂದಿಗೆ ಸಂವಾದ ನಡೆಸಲು ನಾನು ಆಯ್ಕೆಯಾಗಿರುವುದು ಅತ್ಯಂತ ಸಂತೋಷವಾಗಿದೆ. ಈ ಮೂಲಕ ನಮ್ಮ ಶಾಲೆಯ ಹೆಸರು ರಾಷ್ಟ್ರಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಇದಕ್ಕೆ ಕಾರಣಕರ್ತರಾದ ಎಲ್ಲ ಶಿಕ್ಷಕರನ್ನು, ಮುಖ್ಯವಾಗಿ ಸುರೇಶ್ ಮರಕಾಲ ಸರ್ ಅವರನ್ನು ವಂದಿಸುತ್ತೇನೆ.
ವರದಿ : ದಿನೇಶ್ ರಾಯಪ್ಪನ ಮಠ