Connect with us

Hi, what are you looking for?

Diksoochi News

Uncategorized

ಬಸ್ರೂರು: ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಕಂಚಿನ ಕಂಬದಲ್ಲಿ ಶಾಸನ ಪತ್ತೆ

0

ಬಸ್ರೂರು : ಶ್ರೀ ತಿರುಮಲ ವೆಂಕಟರಮಣ ದೇವಾಲಯದಲ್ಲಿದ್ದ ಕಂಚಿನ ಸ್ತಂಭದಲ್ಲಿ ಶಾಸನ ಪತ್ತೆಯಾಗಿದೆ. ನೂರಾರು ವರ್ಷಗಳ ಕಾಲ ದೀಪವನ್ನು ಹಚ್ಚುವ ಮೂಲಕ ಕಂಚಿನ ದೀಪಸ್ತಂಭ ಕರಿ ಕಟ್ಟಿದ ಪರಿಣಾಮವಾಗಿ ಆಮೆಯ ಹಣೆಯ ಮೇಲ್ಭಾಗದಲ್ಲಿ ಇದ್ದ ನಾಲ್ಕು ಸಾಲಿನ ಶಾಸನ ಯಾರ ಕಣ್ಣಿಗೂ ಬೀಳಲ್ಲಿಲ್ಲ. ಆದರೆ ಬಸರೂರಿನ ಯುವ ಬ್ರಿಗೇಡ್ ತರುಣರು ಕೈಗೊಂಡ ಶ್ರಮ ದಾನದ ಫಲಶೃತಿಯಾಗಿ ಕಂಚಿನ ಕಂಭದ ಕೆಳಭಾಗ ಇಂದು ಫಳ ಫಳವಾಗಿ ಹೊಳೆಯುತ್ತಿದ್ದು ಸ್ಥಳೀಯ ನಿವಾಸಿಯಾಗಿರುವ ಶ್ರೀ ಪ್ರದೀಪ್ ಕುಮಾರ್ ಬಸರೂರು ಅವರು ಈ ಶಾಸನವನ್ನು ಮೊಟ್ಟಮೊದಲ ಬಾರಿಗೆ ನೋಡಿ ಇದನ್ನು ಓದಿ ಜನರ ಗಮನಕ್ಕೆ ತರಲು ಸಫಲರಾಗಿದ್ದಾರೆ.

ಶ್ರೀ ಪ್ರದೀಪ್ ಕುಮಾರ್ ಬಸರೂರು ಅವರು ಕಂಡುಹಿಡಿದು ಓದಿದ ಅಪ್ರಕಟಿತ ಶಾಸನದಲ್ಲಿ ಇರುವ ನಾಲ್ಕು ಸಾಲುಗಳು ಈ ರೀತಿಯಾಗಿ ಇರುತ್ತದೆ,

(1). ವಿನಾಯಕ ದೇವರ
(2). ಕಂಚಿನ ಕಂಬ 1 ಕ್ಕೆ
(3). ನಗ 29 ಕ್ಕೆ ಅಶಲು
(4). 49//3//0

Advertisement. Scroll to continue reading.

ಡಾ ಜಗದೀಶ್ ಅಗಸಿಬಾಗಿಲು (ಪುರಾತತ್ವ, ಶಾಸನ ಮತ್ತು ಪುರಾತನ ಮಾಪನ ತಜ್ಞರು) ಅವರ ಅನಿಸಿಕೆ ಪ್ರಕಾರ ಈ ಶಾಸನದಲ್ಲಿ ಕಂಚಿನ ದೀಪಸ್ತಂಭವನ್ನು ನಿರ್ಮಾಣ ಮಾಡಲು ಬೇಕಾದ ಕಂಚು ಅಥವಾ ಅದಕ್ಕೆ ಆ ಕಾಲದಲ್ಲಿ ತಗಲುವ ವೆಚ್ಚವನ್ನು ಉಲ್ಲೇಖಿಸಲಾಗಿದೆ. ಸರಿಸುಮಾರು 49 ಸೇರು ಅಂದರೆ 45.73 ಕೆಜಿ ತೂಕದ ಅಂದಿನ ಕಾಲದಲ್ಲಿ ಚಾಲ್ತಿಯಲ್ಲಿದ್ದ ನಾಣ್ಯಕ್ಕೆ ಸಮನಾದ ಕಂಚನ್ನು ಈ ದೀಪಸ್ತಂಭದಲ್ಲಿ ಉಪಯೋಗಿಸಲಾಗಿದೆ. ಇನ್ನೂ ಈ ಶಾಸನದಲ್ಲಿ ಉಲ್ಲೇಖಿಸಿರುವ ವಿನಾಯಕ ಶಿವ ಪುತ್ರ ಗಣಪತಿ ಅಲ್ಲದೇ ಸ್ವಯಂ ಗರುಡನೇ ಏಕೆಂದರೆ ಗರುಡನಿಗೆ ಇರುವ ಹಲವಾರು ಹೆಸರಿನಲ್ಲಿ ವಿನಾಯಕ ಸಹಾ ಒಂದು. ಆದರಿಂದ ಈ ವಿಶಿಷ್ಠವಾದ ದೀಪಸ್ತಂಭವನ್ನು ವಿನಾಯಕ ಸ್ತಂಭ ಅನ್ನುವುದು ಸೂಕ್ತ. ಈ ದೀಪಸ್ತಂಭದಲ್ಲಿ ಕೆತ್ತಲಾಗಿರುವ ಶಿಲ್ಪಗಳ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸ್ತಂಭವನ್ನು ವಿಜಯನಗರದ ಕೊನೆಯ ಕಾಲಘಟ್ಟದಲ್ಲಿ ಅಥವಾ ಕೆಳದಿ (ಇಕ್ಕೇರಿ) ನಾಯಕರ ಪ್ರಥಮ ಕಾಲಘಟ್ಟದಲ್ಲಿ ನಿರ್ಮಾಣ ಮಾಡಿರುವ ಬಗ್ಗೆ ಒಮ್ಮತ ಮೂಡುತ್ತದೆ. ಡಾ ಜಗದೀಶ್ ಅಗಸಿಬಾಗಿಲು ಅವರು ಸಹಾ ಈ ವಿನಾಯಕ ದೇವರ ಕಂಚಿನ ದೀಪಸ್ತಂಭವು 16ನೇ ಶತಮಾನದ ಪ್ರಥಮ ಕಾಲಘಟ್ಟಕ್ಕೆ ಸೇರಿದ್ದು ಎಂದು ಅಭಿಪ್ರಾಯ ಪಡುತ್ತಾರೆ. ನಮ್ಮ ದಕ್ಷಿಣ ಭಾರತದ ಕರಾವಳಿಯಲ್ಲಿ ಅಂದರೆ ಗೋವಾಯಿಂದ ಕೇರಳದವರೆಗೂ ರಾಜರು, ವ್ಯಾಪಾರಿಗಳು, ವ್ಯಾಪಾರಿ ಸಂಘಗಳು ಹಾಗೂ ಸಾರ್ವಜನಿಕರು ದೀಪದ ಸ್ತಂಭವನ್ನು ನಿರ್ಮಿಸಿರುವ ಬಗ್ಗೆ ಮಾಹಿತಿ ಇದೆ. ಇನ್ನೂ ಆಮೆಯ ಮೇಲೆ ಸ್ತಂಭವನ್ನು ನಿರ್ಮಾಣ ಮಾಡುವ ಕಾರ್ಯ ಅದೆಷ್ಟೋ ಶತಮಾನಗಳಿಂದ ನಡೆದುಕೊಂಡು ಬಂದಿದ್ದು ಇದನ್ನು ಇಂದು ಹಲವಾರು ಸುಪ್ರಸಿದ್ಧ ಪುರಾತನ ದೇವಾಲಯಗಳಲ್ಲಿ ಇಂದಿಗೂ ಸಹಾ ಕಾಣಬಹುದು. ಐನೂರು ವರ್ಷಗಳ ಹಿಂದೆ ಬಸರೂರಿನ ವಿನಾಯಕ ಕಂಚಿನ ದೀಪಸ್ತಂಭ ಮೂರು ದೇವಾಲಯಗಳನ್ನು ನೇರವಾಗಿ ನೋಡುತ್ತಿದ್ದರೆ ಇಂದು ಎಲ್ಲವೂ ಬದಲಾಗಿದೆ. ದೀಪಸ್ತಂಭ ಮತ್ತು ಕೋಟೆ ಆಂಜನೇಯ ದೇವಾಲಯದ ಮಧ್ಯದಲ್ಲಿ ಪ್ರಮುಖ ರಸ್ತೆ ಹಾದು ಹೋದರೆ ಇನ್ನೊಂದು ಕಡೆ ದೀಪಸ್ತಂಭದಲ್ಲಿ ಉನ್ನತಿ ನೋಡುತ್ತಿದ್ದ ಶ್ರೀ ಉಮಾಮಹೇಶ್ವರ ದೇವಾಲಯ ಪಾಳುಬಿದ್ದಿದ್ದು ಇವೆರಡರ ನಡುವೆ ಸಭಾಂಗಣ ನಿರ್ಮಾಣವಾಗಿದೆ.

ಬಸರೂರಿನ ಶ್ರೀ ಪ್ರದೀಪ್ ಕುಮಾರ್ ಬಸರೂರು, ಶಾಸನವನ್ನು ಪತ್ತೆ ಹಚ್ಚಿದ್ದು , ಇವರಿಗೆ ಮಾಗ9ದಶ9ನದೊಂದಿಗೆ ಶ್ರೀ ಅಜಯ್ ಕುಮಾರ್ ಶಮಾ9 ,ಸಹಕಾರವಾಗಿ ಶ್ರೀ ಶ್ರುತೇಶ್ ಆಚಾಯ9 ಮೂಡುಬೆಳ್ಳೆ, ವೇದ ಬ್ರಹ್ಮ ಶ್ರೀ ಪ್ರಭಾಕರ ಬಾಯರಿ, ಡಾ ರವಿಕುಮಾರ್ ಕೆ ನವಲಗುಂದ, ಶ್ರೀ ಮಧುಕರ ಮೈಯಾ ಹಾಗೂ ಡಾ ಜಗದೀಶ್ ಅಗಸಿಬಾಗಿಲು,ಸತೀಶ್ ಗುಂಡ್ಮಿ, ನೀಡಿರುತ್ತಾರೆ.

ಬಸ್ರೂರು ಕುರಿತು :

ನಮ್ಮ ದೇಶದ ಐತಿಹಾಸಿಕ ಪುರಾಣಗಳ ಪ್ರಕಾರ ಕರ್ನಾಟಕದ ಕರಾವಳಿಯ ವಾರಾಹಿ (ಹಾಲಾಡಿ) ನದಿಯ ದಂಡೆಯ ಮೇಲೆ ವಸು ಚಕ್ರವರ್ತಿ ಸಾಕಷ್ಟು ಪ್ರಮಾಣದಲ್ಲಿ ದೇವಾಲಯಗಳು ಮತ್ತು ಕೆರೆಗಳನ್ನು ನಿರ್ಮಾಣ ಮಾಡಿರುವ ಬಗ್ಗೆ ಉಲ್ಲೇಖ ಇದೆ. ಈ ಸ್ಥಳವನ್ನು ಬಸುರೇ ಪಟ್ಟಣ ಅಥವಾ ಬರಕಲೂರು ಎಂದು ಕರೆಯುತ್ತಿದ್ದ ಬಗ್ಗೆ ಉಲ್ಲೇಖ ಇದ್ದರೆ 17ನೇ ಮತ್ತು 18ನೇ ಶತಮಾನದ ಶಾಸನದಲ್ಲಿ ವಾಸುಪುರ (ಸಂಸ್ಕøತ ಪ್ರಭಾವಿತ) ಎಂದು ನಮೂದಿಸಲಾಗಿದೆ. ಇನ್ನೂ ಈ ಪ್ರದೇಶಕ್ಕೆ ಬಂದ ಸಹಸ್ರಾರು ಸಂಖ್ಯೆಯ ವ್ಯಾಪಾರಿಗಳು ಈ ಐತಿಹಾಸಿಕ ಪಟ್ಟಣವನ್ನು ಬಾರ್ಸಿಲರ್, ಬಸ್ನೂರ್, ಬರೇಸ್, ಅಬು ಸರೂರ್ ಮತ್ತು ಬಾಸೇಲ್ಲರ್ ಎಂದು ಕರೆಯುತ್ತಿದ್ದರು. ಆದರೆ ಇಂದು ಈ ಪ್ರಸಿದ್ಧ ಐತಿಹಾಸಿಕ ವ್ಯಾಪಾರಿ ಬಂದರು ಪಟ್ಟಣವನ್ನು ಬಸರೂರು ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಅಂದಿನ ಕಾಲದಲ್ಲಿ (16ನೇ ಶತಮಾನದಲ್ಲಿ) ಕರಾವಳಿಯ ಗೋವಾ, ಅಂಜೆಡೀವ್, ಮಿರ್ಜಾನ್, ಹೊನ್ನಾವರ, ಭಟ್ಕಳ, ಬಸರೂರು, ಬ್ರಹ್ಮಾವರ, ಬಾರಕೂರು, ಉಡುಪಿ, ಮಂಗಳೂರು, ಮಂಜೇಶ್ವರ ಮತ್ತು ಕುಂಬಳ ಪ್ರಮುಖ ಬಂದರು ನಗರವಾಗಿರುತ್ತದೆ. ಕರಾವಳಿಯಲ್ಲಿ ಬೆಳೆಯುತ್ತಿದ್ದ ಅಕ್ಕಿಯನ್ನು ಅತಿ ಹೆಚ್ಚು ಶೇಖರಿಸಿ ವಿದೇಶೀ ವ್ಯಾಪಾರಸ್ಥರಿಗೆ ಸರಬರಾಜು ಮಾಡುತ್ತಿದ್ದ ಪ್ರಮುಖ ಬಂದರಿನ ಹೆಸರೆ “ಬಸರೂರು”. ಬಸರೂರು ವಿಜಯನಗರ ಮತ್ತು ಬಾರಕೂರಿನ ಆಡಳಿತಕ್ಕೆ ಒಳಪಟ್ಟರು ಸಹಾ ಅಂದಿನ ಕಾಲದಲ್ಲೇ ವಿಶಿಷ್ಟವಾದ ಗಣರಾಜ್ಯ ಮಾದರಿಯ ಸರ್ಕಾರವನ್ನು ಹೊಂದಿತ್ತು. ಬಸರೂರಿನ ಪ್ರಜೆಗಳು ಹಿರಿಯ ಶ್ರೇಷ್ಠ ವ್ಯಕ್ತಿಗಳನ್ನು ಆಯ್ಕೆ ಮಾಡಿ ಅವರ ಮೂಲಕ ಆಡಳಿತವನ್ನು ನಡೆಸುತ್ತಿದ್ದರು. ಬಸರೂರಿನ ವ್ಯಾಪಾರಿಗಳು ಎಷ್ಟು ಶ್ರೀಮಂತರಾಗಿದ್ದರು ಎಂದರೆ ಇವರುಗಳು ತಮ್ಮ ಸಂಪತ್ತನ್ನು ಚಿನ್ನದ ಭಾರಸ್ ಗಳಲ್ಲಿ ವರ್ಣಿಸುತ್ತಿದ್ದರು. ಇನ್ನೂ ನಮ್ಮ ದೇಶದ ನೌಕಾ ವ್ಯಾಪಾರ ವಹಿವಾಟು ಮತ್ತು ಚಟುವಟಿಕೆಯನ್ನು ಗಮನಿಸಿದರೆ ದಕ್ಷಿಣ ಭಾರತದ ಕಳಿಂಗ (ಇಂದಿನ ಒಡಿಸ್ಸ ಮತ್ತು ಈಶಾನ್ಯ ಆಂದ್ರಪ್ರದೇಶ), ಚೋಳರು ಮತ್ತು ಪಲ್ಲವರ ಹೆಸರು ಪ್ರಮುಖವಾಗಿ ಮುಂಚೂಣಿಯಲ್ಲಿ ಬರುತ್ತದೆ. ಇನ್ನೂ ಈ ನೌಕಾ ವ್ಯಾಪಾರದಲ್ಲಿ ತೊಡಗಿರುವ ದೇಶವಿದೇಶದ ವ್ಯಾಪಾರಸ್ಥರು ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿಯಾಗಿದ್ದು ಇವರ ಸ್ನೇಹವನ್ನು ಅರಸರು ಅಪೇಕ್ಷಿಸುತ್ತಿದ್ದರು. ಈ ವ್ಯಾಪಾರಿಗಳು ತಾವು ವ್ಯವಹರಿಸುವ ಪದಾರ್ಥ ಅಥವಾ ಸಾಮಾಗ್ರಿ ಅಥವಾ ಪ್ರದೇಶದ ಅನುಸಾರ ವಿಶಿಷ್ಠವಾದ ಸಂಘಗಳನ್ನು ಕಟ್ಟಿಗೊಂಡಿದ್ದರು.

Advertisement. Scroll to continue reading.

ತಮ್ಮ ವ್ಯಾಪಾರ ಚಟುವಟಿಕೆಗಳನ್ನು ಸಂಘಟಿಸಲು ಮತ್ತು ವಿಸ್ತರಿಸಲು ವ್ಯಾಪಾರಿಗಳಿಂದ ದಕ್ಷಿಣ ಭಾರತದ ವ್ಯಾಪಾರ ಸಂಘಗಳನ್ನು ರಚಿಸಲಾಗಿತ್ತು. ಇನ್ನೂ ಈ ಸಂಘಗಳು ಒಂದು ಮಾಧ್ಯಮವಾಗಿ ಮಾರ್ಪಟ್ಟು ಅದರ ಮೂಲಕ ಭಾರತೀಯ ಸಂಸ್ಕೃತಿಯನ್ನು ಇತರ ದೇಶಗಳಿಗೆ ರಫ್ತು ಮಾಡಲು ಅವಕಾಶ ದೊರಕುತ್ತದೆ. ಮಧ್ಯಕಾಲೀನ ದಕ್ಷಿಣ ಭಾರತದಲ್ಲಿ ಹಲವಾರು ವ್ಯಾಪಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದವು, ಉದಾಹರಣೆಗೆ ಗಾತ್ರಿಗಾಳು, ನಖರರು, ಮುಮ್ಮುರಿದಂಡರು, ಅಯ್ಯಾವೊಳೆ ಐನೂರ್ವರು, ಉಭಯನಾನಾದೇಸಿಗಳು, ಸೆಟ್ಟಿ, ಸೆಟ್ಟಿಗುತ್ತರು, ಬಿರುಡಾಸ್, ಬಿರಾವನಿಜಸ್, ಗವರೆಗಳು, ಇತ್ಯಾದಿ. ಕೆಲವು ವ್ಯಾಪಾರ ಸಂಘಗಳಾದ ನಕಾರಸ್ ಮತ್ತು ಗವರೇಗಳು ದೇವಾಲಯದ ಆವರಣದಲ್ಲಿ ಮಾತ್ರ ಭೇಟಿಯಾಗಿ ತಮ್ಮ ಚಟುವಟಿಕೆ ಹಾಗೂ ಮುಂದಿನ ಕಾರ್ಯಚರಣೆ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದರು. ಇನ್ನು ಕೆಲವು ವ್ಯಾಪಾರ ಸಂಘಗಳು ಬಹಳ ಶಕ್ತಿಯುತವಾಗಿದ್ದು ಅಂದಿನ ಸಾಮ್ರಾಜ್ಯದ ಅದೃಷ್ಟವನ್ನು ನಿರ್ಧರಿಸುತ್ತಿದ್ದವು. ಈ ವ್ಯಾಪಾರಿ ಸಂಘಗಳು ತಮ್ಮದೇ ಸೈನಿಕರ ತುಕಡಿಗಳನ್ನು ಹೊಂದಿದ್ದು, ಅರಸರಿಂದ ವಿನಾಯಿತಿಗಳನ್ನು ಅನುಭವಿಸುತ್ತಿದ್ದವು. ಇನ್ನೂ ಬಸರೂರಿಗೆ ಸಂಬಂದಿಸಿದಂತೆ ಸ್ಥಳೀಯ ನಖಾರ ಮತ್ತು ವಿದೇಶಿ ಹಂಜಮಾನ ವ್ಯಾಪಾರಿ ಸಂಘಗಳು ಬಹಳ ಹೆಸರುವಾಸಿಯಾಗಿದ್ದವು. ಹಂಜಮಾನ ವ್ಯಾಪಾರಿ ಸಂಘ ಇದು ಭಾರತೀಯೇತರ ವ್ಯಾಪಾರಿಗಳನ್ನು ಒಳಗೊಂಡಿದ್ದು ಇದರಲ್ಲಿ ಪರ್ಷಿಯನ್ನರು ಮತ್ತು ಅರಬ್ಬರು ಹೆಚ್ಚಾಗಿ ಕಂಡುಬರುತ್ತಿದ್ದರು. ಬಸರೂರಿನಲ್ಲಿ ಇದ್ದ ಐತಿಹಾಸಿಕ 24 ದೇವಾಲಯಗಳಲ್ಲಿ ನಖರೇಶ್ವರ ದೇವಾಲಯ ಬಹಳ ಪ್ರಸಿದ್ಧವಾಗಿದ್ದು ಇದಕ್ಕೆ ಸಂಭಂದಿಸಿದ ನಖರಾ ವ್ಯಾಪಾರಿ ಸಂಘ ಬಸರೂರಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.ಬಸರೂರಿನ ನಖರೇಶ್ವರ ಮತ್ತು ತುಳೇಶ್ವರ ದೇವಾಲಯಗಳು 10ನೇ ಶತಮಾನದಲ್ಲಿ ನಿರ್ಮಾಣವಾಗಿದ್ದವು. ಬಸರೂರು ನಾಥ ಪಂಥಕ್ಕೆ ಸಂಬಂದಿಸಿದಂತೆ ಪ್ರಮುಖ ಕೇಂದ್ರವಾಗಿತ್ತು. ಇನ್ನೂ ಇಲ್ಲಿನ ಹಲವಾರು ದೇವಾಲಯಗಳಿಗೆ ವಿಜಯನಗರದ ರಾಯರು ದತ್ತು ದಾನಗಳನ್ನು ನೀಡಿದ್ದು ಅವುಗಳನ್ನು ಜನರು ಇಂದಿಗೂ ಸಹಾ ನೆನಪಿಸಿಕೊಳ್ಳುತ್ತಾರೆ.

ಶ್ರೀ ತಿರುಮಲ ವೆಂಕಟರಮಣ ದೇವಾಲಯ :

ಬಸರೂರಿನ ಶ್ರೀ ತಿರುಮಲ ವೆಂಕಟರಮಣ ದೇವಾಲಯ ಮತ್ತು ಅದರ ಪರಿಸರ ಎಷ್ಟು ಅದ್ಭುತವಾಗಿದೆಯೋ ಅಷ್ಟೇ ಅದ್ಭುತವಾಗಿದೆ ಇಲ್ಲಿನ ವಿನಾಯಕ ದೇವರ ಕಂಚಿನ ದೀಪಸ್ತಂಭ. ಈ ಪುರಾತನ ಕಂಚಿನ ದೀಪಸ್ತಂಭದಲ್ಲಿ ಗರುಡ ಮತ್ತು ಅವನ ಆರಾಧ್ಯ ದೇವರಿಗೆ ಸಂಬಂಧಿಸಿದ ಪ್ರಸಂಗಗಳನ್ನು ತುಂಬಾ ಸುಂದರವಾಗಿ ತೋರಿಸಲಾಗಿದೆ. ನಮ್ಮ ಭಾರತದಲ್ಲಿ ದೇವಾಲಯಗಳ ಮುಂಭಾಗದಲ್ಲಿ ಸ್ತಂಭಗಳನ್ನು ನಿಲ್ಲಿಸುವ ಪದ್ಧತಿ ಸರಿಸುಮಾರು 2ನೇ ಶತಮಾನ ಬಿ.ಸಿ (2ಟಿಜ ಅeಟಿಣuಡಿಥಿ ಃ.ಅ) ಇಂದ ಕಾಣಬಹುದು. ಉತ್ತರಾಭಿಮುಖವಾಗಿ ನಿರ್ಮಾಣ ಮಾಡಿರುವ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಮುಂಭಾಗದಲ್ಲಿ ಆಯತಾಕಾರದ ಕಲ್ಲಿನ ಅಡಿಪಾಯದ ಮೇಲೆ ಸ್ಥಾಪಿಸಿರುವ ಕಂಚಿನ ದೀಪಸ್ತಂಭ ತನ್ನ ಒಡಲಿನಲ್ಲಿ ಸಾಕಷ್ಟು ಕೌತುಕವನ್ನು ಹಿಡಿದುಕೊಂಡಿದೆ. ಈ ಕಲ್ಲಿನ ಪೀಠದ ಮೇಲೆ ಮೊಟ್ಟಮೊದಲಿಗೆ ಉತ್ತರಾಭಿಮುಖವಾಗಿ ಆಮೆಯನ್ನು ಸ್ಥಾಪಿಸಿ ಅದರ ಬೆನ್ನಿನ ಮೇಲೆ ಇನ್ನೊಂದು ಪೀಠವನ್ನು ಸ್ಥಾಪಿಸಿಲಾಗಿದ್ದು ಇದರ ನಾಲ್ಕು ಮೂಲೆ ಮತ್ತು ಪ್ರತಿ ಬದಿಯ (ಭುಜ) ಮಧ್ಯದಲ್ಲಿ ಆನೆಯ ಶಿಲ್ಪವನ್ನು ರಚಿಸಲಾಗಿದೆ. ಅದೇ ರೀತಿ ಪ್ರತಿ ಆನೆಗಳ ಮಧ್ಯದಲ್ಲಿ ಮೂರು ಹೆಡೆಯ ನಾಗನ ಶಿಲ್ಪವನ್ನು ರಚಿಸಿದ್ದು ಒಟ್ಟಾರೆ ಎಂಟು ಆನೆ ಮತ್ತು ಎಂಟು ನಾಗನ ಶಿಲ್ಪವನ್ನು ಈ ಪೀಠದಲ್ಲಿ ಕಾಣಬಹುದು. ಈ ಪೀಠದ ಮೇಲ್ಭಾಗದಲ್ಲಿ ಇನ್ನೊಂದು ಪೀಠವನ್ನು ಸ್ಥಾಪಿಸಿ ಅದರ ಮೇಲೆ ದಕ್ಷಿಣಾಭಿಮುಖವಾಗಿ ನಿಂತಿರುವ ಐರಾವತ ತರಹವೇ ಸಿಂಗಾರಗೊಂಡಿರುವ ಆನೆಯನ್ನು ಕಾಣಬಹುದು. ಈ ಆನೆಯ ಕಿವಿ, ಕಣ್ಣು, ಎರಡು ದಂತ, ಹಣೆ ಮತ್ತು ಕಾಲುಗಳನ್ನು ಸುಂದರವಾಗಿ ಅಲಂಕರಿಸಲಾಗಿದೆ. ಆನೆಯ ಕುತ್ತಿಗೆಯ ಸುತ್ತಲೂ ಗಂಟೆಯ ಹಾರ ಮತ್ತು ಅದರ ಜೊತೆಗೆ ಇನ್ನೆರಡು ಹಾರಗಳು ಆನೆಯನ್ನು ಇನ್ನಷ್ಟು ಆಕರ್ಷಕವಾಗಿ ಕಾಣಿಸಲು ಸಹಕರಿಸುತ್ತದೆ. ಈ ಆನೆಯ ಬೆನ್ನಿನ ಮೇಲೆ ಪರ್ಷಿಯನ್ ಇಂಡೋ ಇಸ್ಲಾಮಿಕ್ ಶೈಲಿಯ ಕಟ್ಟಡ ಮಾದರಿಯ ದೇವಾಲಯವನ್ನು ಹೋಲುವ ಸುಂದರ ಕೆತ್ತನೆಯನ್ನು ಗಮನಿಸಬಹುದು. ಆನೆಯ ಹಿಂಬದಿಯಲ್ಲಿ ಮಾವುತ ತನ್ನ ಎಡಗೈಯಲ್ಲಿ ಆನೆಯನ್ನು ನಿಯಂತ್ರಿಸುತ್ತ ತನ್ನ ಬಲಗೈಯಲ್ಲಿ ಅಂಕುಶವನ್ನು ಹಿಡಿದುಕೊಂಡಿದ್ದ ಶಿಲ್ಪ ತುಂಬಾ ಆಕರ್ಷಕವಾಗಿದೆ. ಆದರೆ ಇಂದು ಆ ಮಾವುತನ ಬಲಗೈಯಲ್ಲಿ ಹಿಡಿದುಕೊಂಡಿರುವ ಅಂಕುಶ ಮತ್ತು ಬಲಗೈ ಎರಡು ಕಳಚಿ ಬಿದ್ದಿದೆ. ಈ ಮಾವುತ ಧರಿಸಿರುವ ಅಂಗಿ, ವಸ್ತ್ರ, ಪೇಟ ಮತ್ತು ಆಭರಣ ಅಂದಿನ ಕಾಲದ ವಸ್ತ್ರ ವಿನ್ಯಾಸದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುತ್ತದೆ. ಇನ್ನೂ ಕೆಳಭಾಗದಲ್ಲಿ ಇರುವ ಆಮೆಯ ಹಣೆಯ ಮೇಲೆ ನಾಲ್ಕು ಸಾಲಿನ ಅಪ್ರಕಟಿತ ಶಾಸನವನ್ನು ಕಾಣಬಹುದು. ಈ ಆಮೆಯ ಕುತ್ತಿಗೆಯಲ್ಲಿ ರುದ್ರಾಕ್ಷಿಯ ಮಾಲೆಯನ್ನು ಸೂಕ್ಷ್ಮವಾಗಿ ಗಮನಿಸ ಬಹುದು. ಇನ್ನೂ ಆನೆಯ ಬೆನ್ನಿನ ಮೇಲೆ ದೇವಾಲಯ ಆಕೃತಿಯ ಪಲ್ಲಕ್ಕಿಯ ಎಂಟು ಮಿನಾರ್ ಗಳನ್ನು ಹೋಲುವ ಕೆತ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ವಾಸ್ತವದಲ್ಲಿ ನಾಗನನ್ನು ಹೋಲುತ್ತದೆ. ಈ ದೇವಾಲಯದಲ್ಲಿ ದಕ್ಷಿಣಾಭಿಮುಖವಾಗಿ ಅಂಜಲಿ ಮುದ್ರೆಯಲ್ಲಿ ಆಂಜನೇಯ ನಿಂತ್ತಿದ್ದರೆ ಇದೆ ಭಂಗಿಯಲ್ಲಿ ಗರುಡ ಮತ್ತು ಅವನ ಮಡದಿ ಉನ್ನತಿಯು ಕ್ರಮವಾಗಿ ಪೂರ್ವಾಭಿಮುಖವಾಗಿ ಮತ್ತು ಪಶ್ಚಿಮಾಭಿಮುಖವಾಗಿ ನಿಂತಿರುವುದು ಗಮನೀಯ ಅಂಶ. ಇನ್ನೂ ಉತ್ತರಾಭಿಮುಖವಾಗಿ ಕೃಷ್ಣನ ಬಾಲ ಜೀವನವನ್ನು ನಿರ್ದೇಶಿಸುವ ಚಿತ್ರವನ್ನು ಕೆತ್ತಲಾಗಿದೆ. ಈ ದೇವಾಲಯ ಆಕೃತಿಯ ಪಲ್ಲಕ್ಕಿಯ ಮೇಲ್ಭಾಗದಲ್ಲಿ ದೀಪಸ್ತಂಭವನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು 13 ಕೊಳವೆಗಳನ್ನು ಒಂದರೊಳಗೆ ಇನ್ನೊಂದು ಜೋಡಿಸಿ ಅದರ ಮಧ್ಯದಲ್ಲಿ ಪಣತೆಗೆ ಅವಕಾಶ ಕಲ್ಪಿಸುವ ಮೂಲಕ ಒಟ್ಟು 13 ದೀಪದ ಪಣತೆಗಳನ್ನು ಈ ದೀಪದ ಸ್ತಂಭದಲ್ಲಿ ಕಾಣಬಹುದು. ಈ ಸ್ತಂಭದ ತುತ್ತತುದಿಯಲ್ಲಿ ಚೌಕಾಕಾರದ ಪೀಠವನ್ನು ನೀಡಲಾಗಿದ್ದು ಇದರಿಂದ ಈ ದೀಪ ಸ್ತಂಭದ ಸೌಂದರ್ಯ ವೃದ್ಧಿಯಾಗಿದೆ.

ದೀಪ ಸ್ತಂಭದಲ್ಲಿ ಕೆತ್ತಲಾಗಿರುವ ಶಿಲ್ಪಗಳು ಮತ್ತು ಅದರ ಹಿನ್ನೆಲೆ :- ನಮ್ಮ ವೇದ ಪುರಾಣಗಳಲ್ಲಿ ವಿಷ್ಣುವಿನ ದಶಾವತಾರದಲ್ಲಿ ಎರಡನೇ ಅವತಾರವಾಗಿರುವ ಕೂರ್ಮ ಅವತಾರ ಮತ್ತು ಅದಕ್ಕೆ ಸಂಬಂಧಿಸಿದಂತೆ ವಿವರವಾದ ವಿವರಣೆಯನ್ನು ನೀಡಲಾಗಿದೆ. ಸಮುದ್ರಮಂಥನದ ಸಮಯದಲ್ಲಿ ವಿಷ್ಣು ಕೂರ್ಮ ಅವತಾರದಲ್ಲಿ ಭೂಮಿಯನ್ನು ತನ್ನ ಬೆನ್ನಿನ ಮೇಲೆ ಇರಿಸಿಕೊಂಡು ಭೂಮಿಗೆ ಆಸರೆಯಾಗುತ್ತಾನೆ ಹಾಗಾಗಿ ಇದನ್ನು ಸೂಚಿಸಲು ಆಮೆಯನ್ನು ಈ ದೀಪಸ್ತಂಭದ ಬುಡದಲ್ಲಿ ಸ್ಥಾಪಿಸಲಾಗಿದೆ. ನಮ್ಮ ಕೆಲವು ಪುರಾಣಗಳಲ್ಲಿ ಭೂಮಿಯು ಅಲಗಾಡುವಾಗ ಆನೆಗಳು ಅಷ್ಟದಿಕ್ಕಿನಲ್ಲಿ ತಮ್ಮ ಅಂಡನ್ನು ಭೂಮಿಗೆ ವರಗಿ ಅದನ್ನು ಸ್ಥಿರ ಮಾಡಿದವು ಎಂದು ಹೇಳಿದರೆ ಇನ್ನೂ ಕೆಲವು ಪುರಾಣಗಳಲ್ಲಿ ನಾಗ ಅಷ್ಟದಿಕ್ಕಿನಲ್ಲಿ ಭೂಮಿಗೆ ಆಸೆರೆಯಾಗಿರುವ ಬಗ್ಗೆ ಉಲ್ಲೇಖ ಇದೆ. ಹಾಗಾಗಿ ಬಸರೂರಿನ ಕಂಚಿನ ದೀಪಸ್ತಂಭದಲ್ಲಿ ಒಟ್ಟು ಎಂಟು ಆನೆ ಮತ್ತು ನಾಗನನ್ನು ಕೆತ್ತಲಾಗಿದೆ. ಎಂಟು ದಿಕ್ಕಿನಲ್ಲಿ ಕೆತ್ತಲಾಗಿರುವ ಆನೆಗಳಿಗೆ ಸುಂದರವಾದ ಹೆಸರುಗಳಿದ್ದು ಅದರಲ್ಲಿ ಬಹಳ ಪ್ರಮುಖ ವಾಗಿರುವುದು ಪೂರ್ವ ದಿಕ್ಕಿನಲ್ಲಿ ಇರುವ ವಿರೂಪಾಕ್ಷ, ಪಶ್ಚಿಮ ದಿಕ್ಕಿನಲ್ಲಿ ಇರುವ ಸೌಮನಸ, ಉತ್ತರ ದಿಕ್ಕಿನಲ್ಲಿ ಇರುವ ಭದ್ರ ಮತ್ತು ದಕ್ಷಿಣ ದಿಕ್ಕಿನಲ್ಲಿ ಇರುವ ಮಹಾಪದ್ಮ. ದೀಪಸ್ತಂಭದ ಬೃಹತ್ ಆನೆ ಇಂದ್ರನ ವಾಹನ ಐರಾವತವನ್ನು ಸೂಚಿಸುತ್ತದೆ. ವಿಷ್ಣುವಿನ ವಾಹನವಾಗಿರುವ ಗರುಡ ತನ್ನನ್ನು ತಾನೇ ಶ್ರೀ ವಿಷ್ಣುವಿನ ಮಹಾನ್ ಭಕ್ತಯೆಂಬ ಅಹಂಕಾರ ಪಿತ್ತ ಏರಿದಾಗ ಇದನ್ನು ತಗ್ಗಿಸಲು ಶ್ರೀ ಕೃಷ್ಣ ಒಂದು ಜಾಲವನ್ನು ಹೆಣೆದು ಆಂಜನೇಯನ ಸಹಾಯದಿಂದ ಗರುಡನ ಅಹಂಕಾರವನ್ನು ಮುರಿಯಲು ರಚಿಸಿದ ಜಾಲವೇ ಗರುಡ ಗರ್ವಭಂಗ.

ಈ ಸಂಪೂರ್ಣ ಸಂಚಿಕೆಯನ್ನು ನೆನಪಿಸಲು ಈ ದೀಪಸ್ತಂಭದಲ್ಲಿ ಆಂಜನೇಯ ಶ್ರೀ ತಿರುಮಲ ವೆಂಕಟರಮಣ ಸ್ವಾಮಿಯ ಗರ್ಭಗುಡಿಯನ್ನು ನೋಡಿದರೆ ಗರುಡ ಶ್ರೀ ಕೋಟೆ ಆಂಜನೇಯನ ಗರ್ಭಗುಡಿಯನ್ನು ನೋಡುತ್ತ ಅಂಜಲಿ ಮುದ್ರೆಯಲ್ಲಿ ನಮಸ್ಕರಿಸುತ್ತಿರುವ ದೃಶ್ಯ ನಿಜಕ್ಕೂ ಅದ್ಭುತ. ಈ ಕೋಟೆ ಆಂಜನೇಯ ದೇವಾಲಯ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಬಲದಲ್ಲಿ ಇದ್ದು ಪಶ್ಚಿಮಾಭಿಮುಖವಾಗಿದೆ. ಇನ್ನೂ ತಿರುಮಲ ವೆಂಕಟರಮಣ ದೇವಾಲಯದ ಎಡಭಾಗದಲ್ಲಿ ಇರುವ ಪುಷ್ಕರಣಿಯ ದಂಡೆಯ ಮೇಲೆ ನಿರ್ಮಿಸಿರುವ ಪೂರ್ವಾಭಿಮುಖ ಉಮಾ ಮಹೇಶ್ವರ ದೇವರ ದೇವಾಲಯದ ಗರ್ಭಗುಡಿಯನ್ನು ನೋಡುತ್ತಿರುವ ಶಿಲ್ಪ ನೋಡಲು ಗರುಡನ ತರಹವೇ ಕಾಣಿಸಿದರು ಇದು ವಾಸ್ತವದಲ್ಲಿ ಗರುಡನ ಮಡದಿ ಉನ್ನತಿಯ ಶಿಲ್ಪವಾಗಿದೆ. ಇನ್ನೂ ಗರುಡ ಗರ್ವಭಂಗದ ಸೂತ್ರಧಾರ ಶ್ರೀ ಕೃಷ್ಣನ ಬಾಲ ಜೀವನವನ್ನು ವರ್ಣಿಸುವ ಒಂದು ದೃಶ್ಯವನ್ನು ದೀಪಸ್ತಂಭದಲ್ಲಿ ಉತ್ತರಾಭಿಮುಖವಾಗಿ ಕೆತ್ತಲಾಗಿದೆ. ಇದರಲ್ಲಿ ಬಾಲಕೃಷ್ಣ ಗೋಪಿಕೆಯರ ವಸ್ತ್ರಗಳನ್ನು ಕದ್ದು ಮರ ಏರಿ ಸತಾಯಿಸುವ ದೃಶ್ಯವನ್ನು ತುಂಬಾ ಸೊಗಸಾಗಿ ಕೆತ್ತಲಾಗಿದೆ. ಇನ್ನೂ ಈ ದೀಪಸ್ತಂಭವನ್ನು ನಿರ್ಮಾಣ ಮಾಡಿರುವ ಪದ್ಧತಿಯು ಸಹಾ ರೋಚಕವಾಗಿದೆ. ಅಂದಿನ ಕಾಲದಲ್ಲಿ ಸಾಮಾನ್ಯವಾಗಿ ಮರ ಅಥವಾ ಕಬ್ಬಿಣದ ಕಂಬವನ್ನು ಕಲ್ಲಿನ ಅಡಿಪಾಯದ ಮೇಲೆ ನಿಲ್ಲಿಸಿ ಅದರ ಸುತ್ತಲೂ ಕಂಚಿನಿಂದ ವಿವಿಧ ಆಕೃತಿಯ ಶಿಲ್ಪಗಳು ಮತ್ತು ಹಣತೆಯನ್ನು ನಿರ್ಮಾಣ ಮಾಡಲಾಗಿದೆ.

ವರದಿ : ದಿನೇಶ್ ರಾಯಪ್ಪನಮಠ

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ನವದೆಹಲಿ: ಶೀಘ್ರದಲ್ಲೇ ಟೋಲ್ ಪಾವತಿ ಸೇವೆಗಳಿಗೆ ತೆರೆ ಬೀಳಲಿದ್ದು, ಸ್ಯಾಟೆಲೈಟ್ ಆಧಾರಿತ ಟೋಲ್ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಲಿ ಇರುವ ಫಾಸ್ಟ್ ಟ್ಯಾಗ್ ಪಾವತಿ...

ರಾಷ್ಟ್ರೀಯ

0 ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಐವರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ವಿಧಾನಸಭಾ ಚುನಾವಣೆಯ  ನಾಮಪತ್ರ ಸಲ್ಲಿಕೆಯ ಡೆಡ್‌ಲೈನ್‌ ಬುಧವಾರ ಮುಕ್ತಾಯವಾಗಿದ್ದು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು...

ರಾಜ್ಯ

0 ಮೈಸೂರು: ಮೈಸೂರಿನಲ್ಲಿ 2014 ರಿಂದಲೇ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ. ಈ ಮೈತ್ರಿ ಹೊಸದೇನಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು 2014 ರಿಂದಲೇ ಅನಧಿಕೃತವಾಗಿ...

ರಾಜ್ಯ

0 ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಬ್ಬ ಗೂಂಡಾ, ರೌಡಿ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಇಂತಹವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆಂದು ಕಾಂಗ್ರೆಸ್‌ ಮುಖಂಡ ಯತೀಂದ್ರ...

ರಾಜ್ಯ

0 ಬೆಂಗಳೂರು : ಲೋಕಸಭಾ ಚುನಾವಣೆಗೆ ಕರ್ನಾಟಕದ ತನ್ನ ಪಾಲಿನ 25 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ರಾಜ್ಯದಲ್ಲಿ ಶೇ.60ಕ್ಕೂ ಹೆಚ್ಚು ಹಾಲಿ ಸಂಸದರಿಗೆ ಕೊಕ್‌ ನೀಡಿ ಹೊಸಬರಿಗೆ ಕಮಲ ಪಡೆ ಮಣೆ ಹಾಕಿದೆ....

error: Content is protected !!