ಉಡುಪಿ : ವಿಶ್ವ ರಂಗಭೂಮಿ ದಿನದ ಸಂದೇಶ, ಸಂಭ್ರಮಗಳ ನಡುವೆ ದ.ಕ, ಉಡುಪಿ ಜಿಲ್ಲೆಗಳಲ್ಲಿ ಜಿಲ್ಲಾ ರಂಗಮಂದಿರ ಗಳಿಲ್ಲ ಎಂಬುದನ್ನು ನಾನು ನೆನಪಿಸಬೇಕಾಗಿದೆ. ಜಿಲ್ಲಾ ರಂಗ ಮಂದಿರ , ನಾಟಕ, ಯಕ್ಷಗಾನ, ಸಂಗೀತ, ಭರತನಾಟ್ಯ, ಜಾನಪದ
ಸಂಘಟನೆಗಳ ರಿಹರ್ಸಲ್, ಪ್ರದರ್ಶನ, ವಿಚಾರಗೋಷ್ಠಿ ಗಳಿಗೆ ಅಗತ್ಯವಾಗಿದೆ ಎಂದು ಉಡುಪಿ ರಥ ಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ ಹೇಳಿದ್ದಾರೆ. ವಿಶ್ವ ರಂಗಭೂಮಿಯ ದಿನವಾದ ಇಂದು ಉಭಯ ಜಿಲ್ಲೆಗಳಲ್ಲಿನ ರಂಗ ಮಂದಿರದ ಸಮಸ್ಯೆಯ ಕುರಿತು ಮಾತಾಡಿದ ಅವರು,
ಮಂಗಳೂರಿನಲ್ಲಿ 25 ವರ್ಷ ಗಳಿಂದ ಹೋರಾಟ ನಡೆದರೂ, ಜಾಗ ಗುರುತಿಸಿದ್ದರೂ
ಜಿಲ್ಲಾ ರಂಗ ಮಂದಿರ ನಿರ್ಮಾಣ ಆಗಿಲ್ಲ. ಉಡುಪಿಯಲ್ಲಿ ನಾಟಕ ಸ್ಪರ್ಧೆಗಳು, ನಾಟಕ ಉತ್ಸವ ಗಳು ನಡೆಯುತ್ತಿದ್ದರೂ, ಜಿಲ್ಲಾ ರಂಗಮಂದಿರ ಬೇಕೆಂದು ಜನ ಪ್ರತಿನಿಧಿಗಳಿಗೆ ಮನದಟ್ಟು ಆಗಿಲ್ಲ. ಅಜ್ಜರಕಾಡಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಳಿ ಒಳ್ಳೆಯ ನಿವೇಶನ ಇದೆ. ( ksrtc ನಿಲ್ದಾಣ ಈಗ ಬನ್ನಂಜೆ ಯಲ್ಲಿ ಆಗಿದೆ ) ಎಂದಿದ್ದಾರೆ.
ನಮ್ಮ ಜನ ಪ್ರತಿನಿಧಿಗಳು ನಾಟಕೋತ್ಸವ ಗಳಿಗೆ ಅತಿಥಿಗಳಾಗಿ ಬರುತ್ತಾರೆ. ಹಲವು ಜಿಲ್ಲೆಗಳಲ್ಲಿ ಇರುವಂತೆ ನಮ್ಮ ಜಿಲ್ಲೆಗೂ ಜಿಲ್ಲಾ ರಂಗ ಮಂದಿರಬೇಕೆಂದು ಅವರಿಗೆ ಮನವರಿಕೆ ಮಾಡಲು ನಾವು ಯಾಕೆ ಸೋತಿದ್ದೇವೆ? “ಎಂದು ಅವರು ಪ್ರಶ್ನಿಸಿದ್ದಾರೆ.