ಕುಂದಾಪುರ : ಗ್ರಾಮ ಪಂಚಾಯಿತಿ ಚುನಾವಣೆಗಳು ಪಕ್ಷಾತೀತವಾಗಿ ನಡೆಯುತ್ತದೆ. ತ್ರಿಸ್ತರ ಪಂಚಾಯಿತಿ ವ್ಯವಸ್ಥೆಯ ತಳಹದಿಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಯಲ್ಲಿ ಸ್ಪರ್ಧಿಸಿ, ರಾಜಕೀಯವಾಗಿಯೇ ಅಧಿಕಾರ ಹಂಚಿಕೆ ನಡೆಯುವುದರಿಂದ ಗ್ರಾಮ ಅಭಿವೃದ್ಧಿಗೆ ತೊಡಕಾಗುತ್ತದೆ ಎನ್ನುವ ಅನುಭವದ ಹಿನ್ನೆಲೆಯಲ್ಲಿ ಈ ಚುನಾವಣೆಗಳನ್ನು ಪಕ್ಷಾತೀತವಾಗಿ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿತ್ತು ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಆರ್.ಎನ್.ಶೆಟ್ಟಿ ಸಭಾಂಗಣದ ಮಿನಿ ಹಾಲ್‌ನಲ್ಲಿ ಭಾನುವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ನಡೆದ ಕೋಟೇಶ್ವರ, ಆನಗಳ್ಳಿ, ಬಸ್ರೂರು, ಹಂಗಳೂರು, ಕಂದಾವರ, ಬಳ್ಕೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ ಕಾರ್ಯಕರ್ತರ ಅಭಿನಂದನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧಿಕೃತವಾಗಿ ಪಕ್ಷಗಳ ಚಿಹ್ನೆ ಇಲ್ಲದೆ ಇದ್ದರೂ, ಅಭ್ಯರ್ಥಿಗಳನ್ನು ಪಕ್ಷಗಳು ಬೆಂಬಲಿಸುವ ಹಾಗೂ ಪಕ್ಷೇತರರಾಗಿ ಸ್ಪರ್ಧಿಸುವ ವ್ಯವಸ್ಥೆಗಳು ಇದೆ. ಎಲ್ಲ ಚುನಾವಣೆಗಳ ವಿಜಯ ಹಣದ ಮೇಲೆ ನಡೆಯುತ್ತದೆ ಎನ್ನುವ ಭಾವನೆ ಇದೆ. ಎಲ್ಲ ಹಂತದ ಚುನಾವಣೆಗಳಲ್ಲಿ ಹಣ ಪ್ರಭಾವ ಬೀರಿದರೂ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಣ ಶೇ.100 ಪ್ರಭಾವ ಬೀರೊದಿಲ್ಲ. ಹಣ ಕೊಟ್ಟು ಗೆಲ್ಲಿಸಿದವರು ಎಲ್ಲ ಸಂದರ್ಭದಲ್ಲಿಯೂ ಸಿಗೋದಿಲ್ಲ ಎನ್ನುವ ಭಾವನೆ ಇರೋದರಿಂದ ಗ್ರಾಮದ ಅಭಿವೃದ್ಧಿಯ ಚಿಂತನೆ ಇರುವವರನ್ನೆ ಆಯ್ಕೆ ಮಾಡುತ್ತಾರೆ.
ಗ್ರಾಮದ ಮೂಲಭೂತ ಸೌಕರ್ಯಗಳನ್ನುಯ ಒದಗಿಸುವ ಜವಾಬ್ದಾರಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗ್ರಾಮದ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಹೊಣೆ ಇದೆ. ಗ್ರಾಮ ಸಭೆ, ಪಂಚಾಯಿತಿ ಸಭೆ, ವಾರ್ಡ್, ಎಸ್.ಸಿ, ಎಸ್.ಟಿ , ಮಕ್ಕಳ, ಮಹಿಳೆಯರ ಗ್ರಾಮ ಸಭೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಅಭಿವೃದ್ಧಿ ಹಾಗೂ ಸಮಸ್ಯೆಗಳ ಚಿಂತನೆ ನಡೆಸಬೇಕು. ಎಂ.ಪಿ, ಎಂಎಲ್ಎ ಸೇರಿದಂತೆ ಯಾವುದೆ ಜನಪ್ರತಿನಿಧಿಗಳು ಗ್ರಾಮ ಸಭೆಯ ಸದಸ್ಯರಾಗಿರೋದಿಲ್ಲ. ಆದರೆ ಗ್ರಾಮದ ಪ್ರತಿಯೊಬ್ಬರು ಗ್ರಾಮ ಸಭೆಯ ಸದಸ್ಯರಾಗಿರುತ್ತಾರೆ. ಗ್ರಾಮ ಸಭೆಗಳಲ್ಲಿ ಹೆಚ್ಚಿನ ಜನ ಭಾಗವಹಿಸುತ್ತಾರೆ ಎಂದಾದರೆ, ಅವರು ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಅರ್ಥ. ಪಂಚಾಯಿತಿ ಚುನಾವಣೆಯಲ್ಲಿ ಸೋತವರು ಅಭಿವೃದ್ಧಿ ಪರವಾದ ಚಿಂತನೆಯನ್ನು ಇರಿಸಿಕೊಂಡು ಗ್ರಾಮ ಪಂಚಾಯಿತಿ ಸಭೆಗಳನ್ನು ಹೊರತು ಪಡಿಸಿ ಉಳಿದ ಅರ್ಹತಾ ಸಭೆಗಳಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದರು.
ಕೋಟೇಶ್ವರ, ಆನಗಳ್ಳಿ, ಬಸ್ರೂರು, ಹಂಗಳೂರು, ಕಂದಾವರ, ಬಳ್ಕೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ ಕಾರ್ಯಕರ್ತರನ್ನು ಅಭಿನಂದಿಸಿದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕಕುಮಾರ ಕೊಡವೂರು, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ, ದೇವಾನಂದ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಶಾಲೆಟ್ ರೆಬೆಲ್ಲೋ, ಕೋಡಿ ಶಂಕರ ಪೂಜಾರಿ, ಲಾರೆನ್ಸ್ ಡಿಸೋಜಾ ಆನಗಳ್ಳಿ, ವಸಂತಿ ಮೊಗವೀರ ಕೋಣಿ, ವಿಜಯ್ ಪುತ್ರನ್ ಕಾವ್ರಾಡಿ, ಕೃಷ್ಣದೇವ ಕಾರಂತ್ ಕೋಣಿ, ಗಂಗಾಧರ ಶೆಟ್ಟಿ ಹೇರಿಕುದ್ರು, ರಾಜಶೇಖರ ಶೆಟ್ಟಿ ಮಾರ್ಕೋಡು, ಶೀನ ಪೂಜಾರಿ ಕಂದಾವರ, ಜ್ಯೋತಿ ಪುತ್ರನ್ ಬಳ್ಕೂರು, ಸ್ಟೀವನ್ ಹಂಗಳೂರು, ದೇವಕಿ ಪಿ ಸಣ್ಣಯ್ಯ, ಇಚ್ಛಿತಾರ್ಥ ಶೆಟ್ಟಿ, ಬಿ.ಹಾರೂನ್ ಸಾಹೇಬ್, ಚಂದ್ರ ಅಮೀನ, ಗಣೇಶ್ ಶೇರುಗಾರ, ಜಾನಕಿ ಬಿಲ್ಲವ, ಶಿವ ಪೂಜಾರಿ, ವಿರೇಂದ್ರ ಬಿದ್ಕಲಕಟ್ಟೆ, ಕುಮಾರ ಖಾರ್ವಿ, ಭಾಸ್ಕರ್ ಶೆಟ್ಟಿ, ಸತೀಶ್ ಜಪ್ತಿ ಇದ್ದರು.
ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ ಸ್ವಾಗತಿಸಿದರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ ಕ್ರಾಸ್ಟೋ ನಿರೂಪಿಸಿದರು.
ವರದಿ : ದಿನೇಶ್ ರಾಯಪ್ಪನಮಠ