ಕುಂದಾಪುರ: ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ಕ್ರಿಕೆಟಿಗನೊಬ್ಬ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದ್ದಾನೆ. ಮಹಾರಾಷ್ಟ್ರದ ತನ್ನ ಸಹ ಕ್ರಿಕೆಟಿಗರ ವಲಯದಲ್ಲಿ ಸಖತ್ತಾಗಿ ಮಿಂಚುತ್ತಿರೋ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉದಯೋನ್ಮುಖ ಕ್ರಿಕೆಟಿಗನೇ ಯಶಸ್ ಗಾಣಿಗ.
ಕುಂದಾಪುರ ಮೂಲದ ಪ್ರತಿಭೆ :
ನಾವುಂದದ ಬಡಾಕೆರೆಯವರಾದ ಜಗದೀಶ್ ಗಾಣಿಗ- ಮಹಾಲಕ್ಷ್ಮಿ ಗಾಣಿಗ ಅವರ ಪುತ್ರ ಯಶಸ್. ಸದ್ಯ ಈತ ತಂದೆ-ತಾಯಿ ಜೊತೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದಾನೆ. ಮುಂಬೈ ಅಂಧೇರಿ ಪೂರ್ವದ ಹೋಲಿ ಫ್ಯಾಮಿಲಿ ಹೈಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ ನಾಲ್ಕನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಯಶಸ್, ಐದನೇ ತರಗತಿಗೆ ಪಾರ್ಲೆ ತಿಲಕ್ ವಿದ್ಯಾಮಂದಿರಕ್ಕೆ ಸೇರಿದ್ದು, ಸದ್ಯ ಇಲ್ಲಿ ಏಳನೇ ತರಗತಿಯ ವಿದ್ಯಾರ್ಥಿ ಆಗಿರುತ್ತಾನೆ. ಯಶಸ್ ತಂದೆ ಜಗದೀಶ್ ಗಾಣಿಗ ಅವರು ಮುಂಬೈನಲ್ಲಿ ಕ್ಯಾಟರಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಯಶಸ್ ಕ್ಯಾಟರರ್ಸ್’ ಎಂಬ ಸಂಸ್ಥೆಯನ್ನು ಇವರು ಹೊಂದಿದ್ದು, ಇದು ಮುಂಬೈನ ಪೂರ್ವ ಅಂಧೇರಿಯ ಕಜುವಾಡಿಯಲ್ಲಿ ಕಚೇರಿಯನ್ನು ಹೊಂದಿದೆ.
ಬಾಲ್ಯದ ಕನಸು :
ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದು, ಗಮನ ಸೆಳೆಯುವ ರೀತಿಯಲ್ಲಿ ಪ್ರದರ್ಶನ ನೀಡುತ್ತಿರುವ ಯಶಸ್ ತನ್ನ ಶಾಲೆಯ ಪಾರ್ಲೆ ತಿಲಕ್ ವಿದ್ಯಾಮಂದಿರದ ಕ್ರಿಕೆಟ್ ಅಕಾಡೆಮಿ ಸದಸ್ಯನಾಗಿಯೂ ಅಭ್ಯಾಸ ಮಾಡಿದ್ದಾನೆ. ಇಲ್ಲಿ ಮುಖ್ಯ ಕೋಚ್ ಆಗಿರುವ ದಿವಾಕರ್ ಶೆಟ್ಟಿ ಅವರು ಯಶಸ್ ಕ್ರಿಕೆಟ್ ಆಟಕ್ಕೆ ಮನಸೋತು ಮುಂಬೈನ ಬಾಂದ್ರಾದಲ್ಲಿರುವ ಪ್ರತಿಷ್ಠಿತ ಎಂಐಜಿ ಕ್ರಿಕೆಟ್ ಕ್ಲಬ್‌ಗೆ ಸೇರಿಸಿದ್ದಾರೆ.
ಗಾಣಿಗ ಬ್ರಿಲಿಯಂಟ್ ಬಿರುದು :
ಕ್ರಿಕೆಟ್ ಜೊತೆಗೆ ವಿದ್ಯಾಭ್ಯಾಸದಲ್ಲೂ ಯಶಸ್ ಚುರುಕಾಗಿರುವುದರಿಂದ ಶಾಲಾ ಆಡಳಿತ ಮಂಡಳಿ, ಬೋಧಕ ವರ್ಗ ಈತನನ್ನು “ಗಾಣಿಗ ಬ್ರಿಲಿಯಂಟ್” ಎಂದೇ ಕರೆದು ಪ್ರೋತ್ಸಾಹಿಸುತ್ತಿದೆ. ಹೀಗಾಗಿ ಈತನ ಸ್ನೇಹಿತರು, ಸಹ ಕ್ರಿಕೆಟಿಗರ ಜೊತೆಗೆ ಕೋಚ್‌ಗಳು ಕೂಡ ಈತನ ನೈಜ ಹೆಸರು ಹೇಳಿ ಕರೆಯುವ ಬದಲು “ಗಾಣಿಗ ಬ್ರಿಲಿಯಂಟ್” ಎಂಬ ನಿಕ್ ನೇಮ್‌ನಿಂದಲೇ ಕರೆಯುತ್ತಿದ್ದಾರೆ
ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ವಿಕೆಟ್ ಕೀಪರ್:
ಯಶಸ್ ಗಾಣಿಗ ಇದೇ ಮಾರ್ಚ್‌ನಲ್ಲಿ ಮಹಾರಾಷ್ಟ್ರದ ಸಾವಂತವಾಡಿಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಒಂದು ಶತಕ ಹಾಗೂ ಒಂದು ಅರ್ಧ ಶತಕ ಬಾರಿಸಿದ್ದಲ್ಲದೆ, ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಬೆಸ್ಟ್ ವಿಕೆಟ್ ಕೀಪರ್ ಆಗಿಯೂ ಗಮನ ಸೆಳೆದಿದ್ದಾನೆ.
ಯಶಸ್ ಯಶಸ್ಸು :
ಅಲ್ಲದೆ ಇತ್ತೀಚೆಗೆ ತನ್ನ ಶಾಲಾ ಟೂರ್ನಮೆಂಟ್‌ನಲ್ಲಿ ಗೇಲ್ಸ್ (GAILS) ಅಂಡರ್-14ರಲ್ಲಿ ಒಂದು ಪಂದ್ಯದಲ್ಲಿ ಶಾರದಾಶ್ರಮ ತಂಡದ ವಿರುದ್ಧ ಸತತ ನಾಲ್ಕು ಗಂಟೆಗೂ ಅಧಿಕ ಕಾಲ ಬ್ಯಾಟಿಂಗ್ ಮಾಡಿ, ತಮ್ಮ ಶಾಲೆಯ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾನೆ. ಜೊತೆಗೆ ಎಂಐಜಿ ಕ್ಲಬ್‌ನಲ್ಲಿ ಅಂಡರ್-12 ಹಾಗೂ ಅಂಡರ್-14 ಎರಡರಲ್ಲೂ ಆಡಿದ್ದಾನೆ. ಅದರಲ್ಲೂ ಅಂಡರ್-12 ತಂಡಕ್ಕೆ ಇವನೇ ಕ್ಯಾಪ್ಟನ್. ಎಂಐಜಿ ಕ್ಲಬ್‌ನಲ್ಲಿ ಕ್ರಿಕೆಟ್ ಕೋಚ್ ಆಗಿರುವ ಪ್ರಶಾಂತ್ ಶೆಟ್ಟಿ ಹಾಗೂ ಚಂದು ಅವರು ಯಶಸ್‌ಗೆ ಮಾರ್ಗದರ್ಶನ ನೀಡುತ್ತಿದ್ದಾರೆ.