ಪಡುಬಿದ್ರಿ: ಕೇಂದ್ರ ಸರಕಾರ ಜಿಲ್ಲಾಡಳಿತಕ್ಕೆ ಎ. 1ರಿಂದ ಹಸ್ತಾಂತರಿಸಿರುವ ಬ್ಲೂ ಫ್ಲ್ಯಾಗ್ ಬೀಚ್ನಲ್ಲಿ ರಾಜ್ಯ ಸರಕಾರದ ಅನುದಾನದೊಂದಿಗೆ ತೇಲುವ ರೆಸ್ಟೋರೆಂಟ್ ಪ್ರಾರಂಭ, ಈಗಿನ 49 ಮಂದಿ ಸಿಬಂದಿ ವರ್ಗವನ್ನು ಉಳಿಸಿಕೊಂಡು ಮುಂದಿನ ಎರಡು ವರ್ಷಗಳಲ್ಲಿ 100 ಮಂದಿಗೆ ಉದ್ಯೋಗ ಸೃಷ್ಟಿ ಯೋಜನೆ, ಹೆಚ್ಚಿನ ಪ್ರವಾಸೀ ಆಕರ್ಷಣೆ ಹಾಗೂ ತೂಗು ಸೇತುವೆ ನಿರ್ಮಾಣದ ಮೂಲಕ ಅಭಿವೃದ್ಧಿಗಳಿಗೆ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಅವರು ಎ. 2ರಂದು ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್ನಲ್ಲಿ ಫುಡ್ ಕೋರ್ಟ್, ಪ್ರವಾಸಿ ಆಕರ್ಷಣೆಯ ಕಯಾಕಿಂಗ್, ಬೋಟಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಕಾಮಿನಿ ಹೊಳೆಯಲ್ಲಿ ಕಯಾಕಿಂಗ್ ವಿಶಿಷ್ಟ ಅನುಭವವನ್ನೂ ಜಿಲ್ಲಾಧಿಕಾರಿ ಪಡೆದರು.