ಬ್ರಹ್ಮಾವರ : ಬಾರಕೂರಿನ ಉದ್ದಾಲಗುಡ್ಡೆಯ ಶಾಲೆಯ ಬಳಿಯಲ್ಲಿ ಭಾನುವಾರ ದೀಪಕ್ ಶೆಟ್ಟಿಯವರಿಂದ ಪಾವಂಜೆ ಮೇಳದವರಿಂದ ಸೇವೆ ಆಟವಾಗಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಯಿತು. ಈ ವೇಳೆ ಪ್ರಥಮಬಾರಿಗೆ ಬಾರಕೂರಿಗೆ ಆಗಮಿಸಿದ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕಮಲಶಿಲೆ ದುರ್ಗಾಪರಮೇಶ್ವರೀ ದೇವಸ್ಥಾನದ ಸಚ್ಚಿದಾನಂದ ಚಾತ್ರರು ಪಟ್ಲ ಸತೀಶ ಶೆಟ್ಟಿಯವರನ್ನು ಅರ್ಧ ಬಡಗು ಮತ್ತು ತೆಂಕು ತಿಟ್ಟಿನ ಯಕ್ಷಗಾನ ಕಿರೀಟವನ್ನು ಮತ್ತು ಶಾಲು ಸ್ಮರಣಿಕೆ ಯನ್ನು ನೀಡಿ ಸನ್ಮಾನಿಸಿದರು.
ಈ ಸಂದರ್ಭ ಸನ್ಮಾನಿತ ಸತೀಶ್ ಶೆಟ್ಟಿ ಮಾತನಾಡಿ, ಇದು ಯಕ್ಷಗಾನ ಕಲೆಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಎಲ್ಲಾ ಕಡೆಯಲ್ಲಿ ಕಲೆಯನ್ನು ಗೌರವಿಸಿ, ಕಲಾವಿದರನ್ನು ಗೌರವಿಸುವಂತೆ ಆಗಬೇಕು ಎಂದರು. ಈ ವೇಳೆ ಬಡಗುತಿಟ್ಟಿನ ನೂರು ಯಕ್ಷಗಾನ ರಾಗಗಳ ಧ್ವನಿ ಸುರುಳಿ ಶತಸಾನುರಾಗ ಸಿಡಿಯನ್ನು ಪಟ್ಲ ಸತೀಶ್ ಶೆಟ್ಟಿ ಬಿಡುಗಡೆ ಮಾಡಿದರು. ಅಶಕ್ತ ಯಕ್ಷಗಾನ ಕಲಾವಿದರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಬಾರಕೂರು ಶಾಂತಾರಾಮ ಶೆಟ್ಟಿ, ಅಜಿತ್ ಹೆಗಡೆ ಶಾನಾಡಿ, ಹಿಮಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.