ಕುಂದಾಪುರ : ಧಾರ್ಮಿಕ ಕಾರ್ಯಕ್ರಮದ ನಿಷೇಧದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದಾದ್ಯಂತ ಪೂಜಾ ಪದ್ಧತಿ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ಕೋವಿಡ್ -19 ಗೈಡ್ ಲೈನ್ ವ್ಯಾಪ್ತಿಯೊಳಗೆ ಧಾರ್ಮಿಕ ಕಾರ್ಯಕ್ರಮಗಳ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಿಎಂ ಯಡಿಯೂರಪ್ಪರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ನೂತನ ಸುತ್ತೋಲೆಯಂತೆ ಉಳಿದೆಲ್ಲ ಸಭೆ ಸಮಾರಂಭಗಳಿಗೆ ಸೀಮಿತ ಸಂಖ್ಯೆಯಲ್ಲಿ ಅವಕಾಶ ನೀಡುತ್ತಿದ್ದು, ಎಲ್ಲಾ ಕಾರ್ಯಕ್ರಮಗಳಿಗೆ ಕೋವಿಡ್ – 19 ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕಾಗಿ ಈ ಕ್ರಮ ಸ್ವಾಗತಾರ್ಹ. ಆದರೆ, ಧಾರ್ಮಿಕ ಕ್ಷೇತ್ರಕ್ಕೆ ಸೀಮಿತಗೊಳಿಸಿ ಕಾರ್ಯಕ್ರಮ ನಿಷೇಧ ಮಾಡಿದ ಹಿನ್ನೆಲೆಯಲ್ಲಿ, ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದಾದ್ಯಂತ ಧಾರ್ಮಿಕ ಕೆಲಸಗಳಿಗೆ ಬಹು ತೊಂದರೆ ಉಂಟಾಗುತ್ತಿದೆ. ಈಗಾಗಲೇ ಅನೇಕ ಕಡೆ ಧಾರ್ಮಿಕ ಚೌಕಟ್ಟಿನ ಯಕ್ಷಗಾನ ಹರಕೆ ಬಯಲಾಟಗಳು, ನೇಮೋತ್ಸವ, ದೇವತಾ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಇತ್ಯಾದಿಗಳಿಗೆ ಸಮಯ ನಿಗದಿಪಡಿಸಿಕೊಂಡಿದ್ದು ಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ. ನೂತನ ನಿಯಮದಿಂದ ಸಾಂಕೇತಿಕವಾಗಿ ಕಾರ್ಯಕ್ರಮ ಮಾಡಲೂ ತೊಂದರೆಯಾಗುತ್ತಿದ್ದು, ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಿಗೆ ಬಹಳ ಸಂಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ – 19 ನಿಯಮಗಳ ವ್ಯಾಪ್ತಿಯೊಳಗೆ ಇತರ ಕಾರ್ಯಕ್ರಮಗಳಿಗೆ ಕೊಟ್ಟಿರುವಂತೆ ನಿಯಮದಲ್ಲಿ ಸಡಿಲಿಕೆಯನ್ನು ಧಾರ್ಮಿಕ ಕಾರ್ಯಕ್ರಮಗಳಿಗೂ ಕೊಡುವ ಮೂಲಕ ಭಕ್ತಾದಿಗಳ ಸಂಕಷ್ಟವನ್ನು ಪರಿಹಾರ ಮಾಡಬೇಕೆಂದು ಮನವಿ ಮಾಡಿದ್ದಾರೆ.
ವರದಿ : ದಿನೇಶ್ ರಾಯಪ್ಪನಮಠ