ಕುಂದಾಪುರ: ವಿಶ್ವ ಮಾನವ ಸಮುದಾಯವನ್ನೆ ಒಟ್ಟುಗೂಡಿಸಬೇಕು ಎನ್ನುವ ಚಿಂತನೆಯನ್ನು ಹೊಂದಿದ್ದ ಬ್ರಹ್ಮಶ್ರೀ ನಾರಾಯಣಗುರುಗಳು. ಗೋಕರ್ಣನಾಥ ಕ್ಷೇತ್ರವಲ್ಲದೆ, 80 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಅವರು ಪ್ರತಿಷ್ಠೆ ಕಾರ್ಯವನ್ನು ನೆರವೇರಿಸಿದ್ದಾರೆ. ಅವರು ಅಂದು ಸ್ಥಾಪಿಸಿದ್ದ ಶಿಕ್ಷಣ ಸಂಸ್ಥೆಗಳು ಇಂದು ವಿಶ್ವ ವಿದ್ಯಾಲಯಗಳಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.
ಕುಂದಾಪುರದ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ ನೂತನ ಗ್ರಾಮಪಂಚಾಯತ್ ಸದಸ್ಯರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಬೆಳವಣಿಗೆ ಸಾಧಿಸಿದಲ್ಲಿ ಸಮಾಜಗಳು ಅಭಿವೃದ್ಧಿಯಾಗುತ್ತದೆ. ಸಂಘಟನೆಗಳು ನಿಂತ ನೀರಾಗದೆ ಹರಿಯುವ ನೀರಾಗಬೇಕು. ವಿದ್ಯೆಯನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ವಿದ್ಯೆಗೆ ಮಾತ್ರ ಬಡತವನ್ನು ಹೋಗಲಾಡಿಸುವ ಶಕ್ತಿ ಇದೆ. ಮಕ್ಕಳಲ್ಲಿ ಜ್ಞಾನಾವರಣಕ್ಕೆ ಅವಕಾಶ ಕಲ್ಪಿಸಬೇಕು. ಭವಿಷ್ಯದ ಪೀಳಿಗೆಯ ಯುವ ಸಮುದಾಯಕ್ಕೆ ನಾಯಕತ್ವ ಅವಕಾಶಗಳು ದೊರಕಬೇಕು. ತುಳು ನಾಡಿನ ವೀರ ಪುರುಷರಾದ ಕೋಟಿ-ಚನ್ನಯ್ಯರ ಬದುಕಿನ ಆದರ್ಶಗಳು ನಮಗೆ ನಿತ್ಯ ಸ್ಮರಣೀಯವಾಗಬೇಕು ಎಂದರು.
ಸೈನ್ಯ, ವೈದ್ಯಕೀಯ, ತಂತ್ರಜ್ಞಾನ, ಶಿಕ್ಷಣ, ಉದ್ಯಮ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬಿಲ್ಲವ ಸಮುದಾಯವನ್ನು ಕೇವಲ ಮೂರ್ತೆಧಾರಿಕೆಗೆ ಸೀಮಿತಗೊಳಿಸುವ ಹುನ್ನಾರದಿಂದ ಹೊರ ಬರಬೇಕಾಗಿದೆ ಎಂದ ಅವರು, ಎಲ್ಲ ಸಮಾಜದವರೊಂದಿಗೆ ಪ್ರೀತಿ, ವಿಶ್ವಾಸದ ನಡೆಯೊಂದಿಗೆ ನಮ್ಮ ಸಮಾಜವನ್ನು ಬೆಳೆಸುವ ಗುರಿ ಸಂಘಟನೆಯವರಲ್ಲಿ ಇರಬೇಕು ಎಂದರು.
ರಾಜಕೀಯವೇ ಬೇರೆ. ಒಳ್ಳೆಯ ಕೆಲಸವನ್ನು ಮಾಡುವವರ ಗುಣಕ್ಕೆ ಮತ್ಸರ ಇರಬಾರದು. ರಾಜ್ಯದ ಸಂಪುಟ ಸಚಿವರಾಗಿ ಕೆಲಸ ಮಾಡುತ್ತಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಕ್ರೀಯಾಶೀಲ ವ್ಯಕ್ತಿತ್ವದ ಸಚಿವರಾಗಿದ್ದಾರೆ. ಆದರೆ ಸಚಿವರುಗಳಿಗೆ ಅವರವರ ಜಿಲ್ಲೆಯ ಉಸ್ತುವಾರಿ ಸಚಿವರಾಗುವ ಅವಕಾಶಗಳಿದ್ದರೂ, ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತ್ರ ಈ ಅವಕಾಶ ದೊರಕಿಲ್ಲ ಎಂದು ವಿನಯಕುಮಾರ ಸೊರಕೆ ಖೇದ ವ್ಯಕ್ತಪಡಿಸಿದರು.
ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವ ಸೇವಾ ಸಂಘದ ಉಪಾಧ್ಯಕ್ಷರಾದ ಭಾಸ್ಕರ ಬಿಲ್ಲವ, ರಾಮ ಪೂಜಾರಿ, ನಾರಯಣಗುರು ಯುವಕ ಮಂಡಲ ಅಧ್ಯಕ್ಷ ಶ್ರೀನಾಥ್ ಪೂಜಾರಿ ಕಡ್ಗಿ ಮನೆ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಬಿಜೂರು ಇದ್ದರು.
ಸಾಧಕರಿಗೆ ಸನ್ಮಾನ, ಗ್ರಾ.ಪಂ ಸದಸ್ಯರಿಗೆ ಅಭಿನಂದನೆ :
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾಸ್ಕರ ಬಿಲ್ಲವ, ವಿಜಯ ಎಸ್.ಪೂಜಾರಿ, ಮಹೇಂದ್ರಕುಮಾರ ಪೂಜಾರಿ, ಜ್ಯೋತಿ ಉದಯ್‌ಕುಮಾರ ಪೂಜಾರಿ, ಶೇಖರ ಪೂಜಾರಿ ಹುಂಚಾರಬೆಟ್ಟು, ಕೆ.ಪಿ.ಶೇಖರ ಪೂಜಾರಿ, ವಿಶ್ವನಾಥ ಪೂಜಾರಿ ಗರಡಿಮನೆ, ಶಂಕರ ಪೂಜಾರಿ ಕಾಡಿನತಾರು ಹಾಗೂ ನೂತನವಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಬಿಲ್ಲವ ಸಮುದಾಯದ ಗ್ರಾಮ ಪಂಚಾಯಿತಿ ಸದಸ್ಯರನ್ನು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹಾಗೂ ಉದ್ಯಮಿ ಗೋವಿಂದ ಬಾಬು ಪೂಜಾರಿ ಅಭಿನಂದಿಸಿದರು.
ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠ್ಠಲವಾಡಿ ಸ್ವಾಗತಿಸಿದರು, ಭಾಸ್ಕರ್ ವಿಠ್ಠಲವಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ : ದಿನೇಶ್ ರಾಯಪ್ಪನಮಠ