ಕುಂದಾಪುರ : ಹೊನ್ನಾವರದಿಂದ ಕುಂದಾಪುರ ಕೋಡಿಯ ವರೆಗಿನ ಅರಬ್ಬಿ ಕಡಲ ಕಿನಾರೆಯಲ್ಲಿ ಮೊಟ್ಟೆಯನ್ನು ಇಡುವ ವಿನಾಶದಂಚಿನ ಕಡಲಾಮೆಗಳನ್ನು ಸಂರಕ್ಷಣೆ ಮಾಡಲು ಕಳೆದ ೧೦ ವರ್ಷಗಳಿಂದ ಪ್ರಚಾರವಿಲ್ಲದೆ ನಿಸ್ವಾರ್ಥವಾಗಿ ದುಡಿಯುತ್ತಿರುವ ಕುಂದಾಪುರದ ಎಫ್.ಎಸ್.ಎಲ್ ಇಂಡಿಯಾ ಸಂಸ್ಥೆಯವರ ಪ್ರಯತ್ನ ಶ್ಲಾಘನೀಯವಾದುದು ಎಂದು ಮಂಗಳೂರು ಅರಣ್ಯ ವೃತ್ತದ ಮುಖ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್ ನೇತಾರ್ಲ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಎಫ್.ಎಸ್.ಎಲ್ ಇಂಡಿಯಾ ಕುಂದಾಪುರ ಇವರ ಸಹಭಾಗಿತ್ವದಲ್ಲಿ ನಡೆದ ಕಡಲಾಮೆ ಸಂರಕ್ಷಣೆ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಫ್.ಎಸ್.ಎಲ್ ಇಂಡಿಯಾ ಸಂಸ್ಥೆಯ ಕಾರ್ಯಕರ್ತರ ಶ್ರಮವನ್ನು ಗುರುತಿಸಿ ಅರಣ್ಯ ಇಲಾಖೆ ಅವರನ್ನು ಗೌರವಿಸಲು ಹೆಮ್ಮೆ ಪಡುತ್ತಿದೆ. ಸಮುದ್ರ ಕಡಲಂಚಿನಲ್ಲಿ ಹಾಕಲಾಗುವ ಕಲ್ಲುಗಳು ಹಾಗೂ ಪ್ರಕೃತಿ ಸಹಜವಾದ ಬದಲಾವಣೆಯಿಂದ ಕಡಲಾಮೆಗಳು ಎಲ್ಲ ಕಡೆಗಳಲ್ಲಿಯೂ ಮೊಟ್ಟೆಗಳನ್ನು ಇಡುವುದಿಲ್ಲ. ಅವು ಸುರಕ್ಷಿತ ತಾಣವನ್ನು ಗುರುತಿಸಿಕೊಳ್ಳುತ್ತದೆ. ಇಂತಹ ಅಪೂರ್ವ ತಳಿಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಕಡಲಾಮೆ ಸಂರಕ್ಷಣೆ ಕುರಿತು ಕಾರ್ಯಾಗಾರ, ಕಡಲಾಮೆ ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.
ಕುಂದಾಪುರ ಅರಣ್ಯ ಉಪ ವಿಭಾಗದ ಡಿಎಫ್ಓ ಆಶೀಶ್ ರೆಡ್ಡಿ, ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಎಫ್.ಎಸ್.ಎಲ್ ಇಂಡಿಯಾ ಕುಂದಾಪುರದ ರಾಕೇಶ್ ಸೋನ್ಸ್, ದಿನೇಶ್ ಸಾರಂಗ ಇದ್ದರು.