ಬ್ರಹ್ಮಾವರ : ರಾಜ್ಯದಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಇದೀಗ 40 ವರ್ಷ ಮೇಲಿನವರು ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳಲು ಆರೋಗ್ಯ ಕೇಂದ್ರಗಳಿಗೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ತಿಂಗಳು ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಜನಜಾಗೃತಿ ಮೂಡಿಸಿದರೂ ಮನಸ್ಸು ಮಾಡದ ಜನರು ಇದೀಗ ಬೆಳಿಗ್ಗೆ 8 ಗಂಟೆಗೆ ಬಂದು ಸೇರುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ. ಕೆಲವೊಂದು ಆರೋಗ್ಯ ಕೇಂದ್ರದಲ್ಲಿ ಅತೀ ಇಕ್ಕಟ್ಟಾದ ಜಾಗ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರ ನೂಕು ನುಗ್ಗಲು ಇರುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವಿಫಲವಾಗಿದೆ ಎಂದು ಕೆಲವು ದಿನದಿಂದ ಕೇಳಿ ಬರುತ್ತಿರುವ ಸುದ್ದಿಗಳು. ಆದರೆ ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇತ್ತೀಚೆಗೆ ಬಂದ ವೈದ್ಯಾಧಿಕಾರಿ ಡಾ ರೋಹಿಣಿಯವರು ಎಲ್ಲದಕ್ಕೂ ಪೂರ್ವ ಸಿದ್ದತೆ ಮಾಡಿಕೊಂಡಿದ್ದಾರೆ.
ಒಂದು ತಿಂಗಳ ಮೊದಲೆ ಆರೋಗ್ಯ ಕೇಂದ್ರದ ಒಂದು ಭಾಗದಲ್ಲಿ ಜನರಿಗೆ ಕುಳಿತು ಕೊಳ್ಳಲು ನೆರಳಿಗಾಗಿ ಹೊಸದಾಗಿ ತಗಡಿನ ಮಾಡು ಮಾಡಿ ಆಸನಗಳ ವ್ಯವಸ್ಥೆಗೊಳಿಸಿದ್ದಾರೆ. ಕೆಲವು ಬಾರಿ ಸ್ವತ: ವೈದ್ಯಾಧಿಕಾರಿಗಳೆ ಸಾರ್ವಜನಿಕರ ಆಧಾರ್ ಕಾರ್ಡ್ ನೊಂದಣಿ ಮಾಡಿಕೊಳ್ಳುವುದು ಮತ್ತು ಇಲ್ಲಿ ಇರುವ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರತಿಯೊಬ್ಬರು ಸಾಮಾಜಿಕ ಅಂತರದಿಂದ ಸರತಿಯಲ್ಲಿ ಬಂದು ಟೋಕನ್ ಪಡೆದು ವ್ಯಾಕ್ಸಿನ್ ನೀಡಲಾಗುತ್ತದೆ. ಇಲ್ಲಿ ವ್ಯಾಕ್ಸಿನ್ ಪಡೆಯಲು ಬರುವ ಜನರನ್ನು ನಿಯಂತ್ರಿಸಲು ಇದೀಗ ಇಲ್ಲಿನ ಅನೇಕ ಸಮಾಜ ಸೇವಾ ಸಂಸ್ಥೆಗಳು ತೊಡಗಿಸಿಕೊಂಡು ಜನರಿಗೆ ಅನುಕೂಲ ಮಾಡಿಕೊಡುತ್ತಿದೆ.
ವರದಿ : ಬಿ.ಎಸ್.ಆಚಾರ್ಯ