ಬೆಂಗಳೂರು: ಅಕ್ರಮವಾಗಿ ಬೆಡ್ ಬುಕಿಂಗ್ ಮಾಡುತ್ತಿದ್ದ ಮಾಫಿಯಾವನ್ನು ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದು, ಬೆಚ್ಚಿ ಬೀಳುವ ಸುದ್ದಿ ಬಹಿರಂಗ ಪಡಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ, ಅಕ್ರಮವಾಗಿ ಬಿಬಿಎಂಪಿ ಬೆಡ್ ಗಳು ಬುಕ್ ಆಗುತ್ತಿರುವುದನ್ನು ಬಹಿರಂಗಪಡಿಸಿದ್ದು, ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಕಳೆದ 1 ತಿಂಗಳ ಅವಧಿಯಲ್ಲಿನ 10 ಸಾವಿರಕ್ಕೂ ಅಧಿಕ ರೋಗಿಗಳಿಗೆ ಬೆಡ್ ಹಂಚಿಕೆ, ವಿಧಾನ, ಸಮಯವನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಬೆಂಗಳೂರು ದಕ್ಷಿಣ ಸಂಸದರ ಕಚೇರಿ ಬಿಬಿಎಂಪಿ ಅಧಿಕಾರಿಗಳು, ಆಸ್ಪತ್ರೆಗಳ ಹಾಗೂ ವಲಯವಾರು ಸಹಾಯವಾಣಿ ಸಿಬ್ಬಂದಿಗಳ ಅವ್ಯವಹಾರವನ್ನು ಬಯಲಿಗೆಳೆದಿದೆ.
ತನಿಖೆ ನಡೆಸಿದಾಗ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಮಿತ್ರ ಸಿಬ್ಬಂದಿ ಬಿಬಿಎಂಪಿ ಹೆಲ್ಪ್ ಲೈನ್ ಹಾಗೂ ಬೆಡ್ ಹಂಚಿಕೆಗೆ ನಿಯುಕ್ತರಾಗಿರುವ ಸಿಬ್ಬಂದಿಗಳು ಕೆಲವು ಖಾಸಗಿ ಆಸ್ಪತ್ರೆಗಳು ಸೇರಿ ಕೃತಕ ಬೆಡ್ ಅಭಾವ ಸೃಷ್ಟಿಸಿ ಸಾರ್ವಜನಿಕರ ಜೀವಗಳ ಜೊತೆ ಚೆಲ್ಲಾಟ ಆಡುತ್ತಿರುವುದು ಕಂಡುಬಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ರಮ ಬೆಡ್ ಬುಕ್ಕಿಂಗ್ ಮಾಫಿಯಾ
ಬೆಂಗಳೂರಿನಲ್ಲಿ ವಾರ್ ರೂಮ್ ಗಳಿಂದಲೇ ಈ ವರೆಗೂ ಪ್ರಭಾವಿಗಳಿಂದ 4,065 ಬೆಡ್ ಗಳನ್ನು ಬುಕ್ ಮಾಡಿದ್ದಾರೆ. ಬಿಬಿಎಂಪಿ ಬೆಡ್ ಬುಕಿಂಗ್ ವೆಬ್ ಸೈಟ್ ಗಳಲ್ಲಿ ಬೆಡ್ ಗಳು ಭರ್ತಿಯಾಗಿರುವುದು ತೋರಿಸುತ್ತಿದೆ. ಆದರೆ ಬೆಡ್ ಅಗತ್ಯವಿಲ್ಲದೇ ಇರುವ ಮನೆಯಲ್ಲಿಯೇ ಐಸೊಲೇಷನ್ ಆಗಿರುವವರ, ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುವವರ ಹೆಸರಿನಲ್ಲಿ ಹಣ ಪಡೆದು ತಮಗೆ ಬೇಕಾಗಿರುವವರಿಗೆ ಅಕ್ರಮವಾಗಿ ಬೆಡ್ ಬುಕ್ ಮಾಡುತ್ತಿರುವ ಮಾಫಿಯಾವನ್ನು ತೇಜಸ್ವಿ ಸೂರ್ಯ ಸಾಕ್ಷ್ಯ ಸಮೇತವಾಗಿ ಬಹಿರಂಗಗೊಳಿಸಿದ್ದಾರೆ.
ನಿಜವಾಗಿಯೂ ಅವಶ್ಯಕತೆ ಇರುವ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಬೆಡ್ ಸಲುವಾಗಿ ಅಲೆದಾಡುತ್ತಿದ್ದರೆ, ಕೆಲವೇ ಕೆಲವರು ಅಕ್ರಮವಾಗಿ ಬೆಡ್ ಗಳನ್ನು ದುಡ್ಡಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಸ್ಪೋಟಕ ಮಾಹಿತಿ ಬಯಲಿಗೆಳೆದಿದ್ದಾರೆ.