ವರದಿ: ಶಫೀ ಉಚ್ಚಿಲ
ಕಾಪು : ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಘೋಷಿಸಿರುವ ಲಾಕ್ಢೌನ್ ಯಶಸ್ಸುಗೊಳಿಸಲು ಸೋಮವಾರ ಬೆಳಗ್ಗಿನಿಂದಲೇ
ಕಾಪು ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಮಾರ್ಗದರ್ಶನದಲ್ಲಿ ಪಡುಬಿದ್ರಿ ಎಸ್ಐ ದಿಲೀಪ್ ಕುಮಾರ್, ಕಾಪು ಎಸ್ಐ ರಾಘವೇಂದ್ರ ಸಿ, ಶಿರ್ವ ಎಸ್ಐ ಶ್ರೀಶೈಲ ಮುರಗೋಡ ಅವರ ನೇತೃತ್ವದಲ್ಲಿ ಮುಂಜಾನೆಯಿಂದಲೇ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಕಾಪು ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಹೆಚ್ಚಿನ ವಾಹನ ಸಂಚಾರ ಕಂಡು ಬರುವ ಕಾಪು ಜಂಕ್ಷನ್, ಮಜೂರು ಸರ್ಕಲ್, ಉಚ್ಚಿಲ – ಪಣಿಯೂರು ಜಂಕ್ಷನ್, ಬೆಳಪು ಜಂಕ್ಷನ್,ಪಡುಬಿದ್ರಿ ಸಹಿತ ವಿವಿಧೆಡೆಗಳಲ್ಲಿ ಅಧಿಕಾರಿಗಳೇ ಖುದ್ದು ಉಪಸ್ಥಿತರಿದ್ದು, ತುರ್ತು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಸಕಾರಣವಿಲ್ಲದೆ ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನಗಳ ದಾಖಲೆಗಳನ್ನು ತಪಾಸಣೆಗೊಳಪಡಿಸಿದ ಪೊಲೀಸರು ವಾಹನ ಸವಾರರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿ, ವಾಪಾಸ್ ಕಳುಹಿಸಿದರು. ಕೆಲವೆಡೆ ದಾಖಲೆ ಪತ್ರಗಳು ಇಲ್ಲದ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಗತ್ಯ ವಸ್ತು ಖರೀದಿಗೆ ವಾಹನ ಸಂಚಾರ ನಿಷೇಧ; ಜನರ ಪರದಾಟ
ಲಾಕ್ಡೌನ್ ಘೋಷಣೆ ಹಿನ್ನೆಲೆ ಅಗತ್ಯ ಆಹಾರ ಸಮಾಗ್ರಿ ಖರೀದಿಗೆ ನಿಗದಿಪಡಿಸಿರುವ ಸಮಯದಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಿರುವ ಕ್ರಮದಿಂದಾಗಿ ಸಾರ್ವಜನಿಕರು ಸಮಸ್ಯೆಗೊಳಗಾಗಿದ್ದಾರೆ. ಮೂರು ನಾಲ್ಕು ಕಿ.ಮೀ ದೂರದಿಂದ ದಿನ ಬಳಕೆ ಸಾಮಾಗ್ರಿ ಹಾಗೂ ಸರಕಾರದಿಂದ ನೀಡಲ್ಪಡುವ 25 ರಿಂದ 30 ಕೆ.ಜಿ ವರೆಗಿನ ತೂಕವಿರುವ ಅಕ್ಕಿ ಸಹಿತ ಪಡಿತರ ಸಾಮಾಗ್ರಿಗಳನ್ನು ಹೊತ್ತೊಯ್ಯಲು ಸಾಧ್ಯವಾಗದೆ ಜನ ಪರದಾಡುವಂತಾಗಿದೆ. ಜನ ಸಾಮಾನ್ಯರ ಸಮಸ್ಯೆಯನ್ನು ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳು
ಗಂಭೀರವಾಗಿ ಪರಿಗಣಿಸಿ ದಿನ ಬಳಕೆ ಸಾಮಾಗ್ರಿ ಖರೀದಿಗೆ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.