ಉಡುಪಿ: 5 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ ಆರೋಪಿಯು ದೋಷಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳು ಕಲ್ಪನಾ ಅವರು ತೀರ್ಪು ಪ್ರಕಟಿಸಿದ್ದಾರೆ.
ಸಂತೋಷ್ ಕೆ. (35) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದು, ಪೋಕ್ಸೋ ಕಾಯ್ದೆಯಡಿ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಲಾಗಿದೆ. 20 ಸಾವಿರ ದಂಡದಲ್ಲಿ 15 ಸಾವಿರ ಸಂತ್ರಸ್ತ ಬಾಲಕಿಗೆ ಹಾಗೂ 5 ಸಾವಿರ ಹಣ ಸರ್ಕಾರಕ್ಕೆ ನೀಡಲು ಮತ್ತು 1 ಲಕ್ಷ ಮೊತ್ತವನ್ನು ಕಾನೂನು ಸೇವಾ ಪ್ರಾಧಿಕಾರದ ಮೂಲಕ ನೊಂದ ಸಂತ್ರಸ್ತೆಗೆ ನೀಡಲು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ :
ಸಂತ್ರಸ್ತೆ ಬಾಲಕಿ ಅಪರಾಧಿ ಸಂತೋಷನಿಗೆ ಸೇರಿದ ಬಾಡಿಗೆ ಮನೆಯಲ್ಲಿ ತಂದೆ-ತಾಯಿ ಹಾಗೂ ಸೋದರನೊಂದಿಗೆ ವಾಸವಿದ್ದಳು. 2019 ಫೆಬ್ರವರಿ ತಿಂಗಳಿನಲ್ಲಿ ಬಾಲಕಿ ಮೇಲೆ ಅಪರಾಧಿ ಲೈಂಗಿಕ ದೌರ್ಜನ್ಯ ಎಸಗಿದ್ದು ಬಾಲಕಿ ತಾಯಿಗೆ ಈ ವಿಚಾರ ತಿಳಿಸಿದ್ದಳು. ತಾಯಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯ ಅಂದಿನ ಪಿಎಸ್ಐ ನಂಜಾ ನಾಯ್ಕ್ ಆರೋಪಿಯನ್ನು ಬಂಧಿಸಿ ಪ್ರಾಥಮಿಕ ತನಿಖೆ ನಡೆಸಿದ್ದು, ಅಂದಿನ ಕಾರ್ಕಳ ವೃತ್ತ ನಿರೀಕ್ಷಕ ವಿ.ಎಸ್. ಹಾಲಮೂರ್ತಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
19 ಸಾಕ್ಷಿದಾರರ ಪೈಕಿ ನ್ಯಾಯಾಲಯದಲ್ಲಿ 10 ಮಂದಿ ವಿಚಾರಣೆ ನಡೆದಿದ್ದು, ಸಂತ್ರಸ್ತ ಬಾಲಕಿ ಹಾಗೂ ಇತರ ಸಾಕ್ಷಿಗಳ ವಿಚಾರಣೆಯನ್ನು ಆಲಿಸಿದ ನ್ಯಾಯಾಧೀಶರು ಆರೋಪಿ ದೋಷಿ ಎಂದು ತೀರ್ಪು ನೀಡಿದ್ದಾರೆ.
ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.