ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕೋವಿಡ್ ಲಾಕ್‌ಡೌನ್ ನಿಂದಾಗಿ ಸಂಕಷ್ಟದಲ್ಲಿರುವ 30 ಕುಟುಂಬಗಳಿಗೆ 10 ದಿನಗಳಿಗೆ ಬೇಕಾಗುವ ಆಹಾರ ವಸ್ತುಗಳ ಕಿಟ್ ಸಿದ್ದಪಡಿಸಿ ಸ್ವತ: ಬಡ ಕುಟುಂಬದ ಮನೆ ಮನೆಗೆ ತೆರಳಿ ಕಿಟ್ ಹಸ್ತಾಂತರ ಮಾಡುವ ಮೂಲಕ ಕೋಟೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ ಅಂಕದಕಟ್ಟೆ ಉತ್ತಮ ಕಾರ್ಯ ಮಾಡುತ್ತಿದ್ದಾರೆ.
ಕೊರೊನಾ ಸಂಕಷ್ಟ ಕಾಲದಲ್ಲಿ ತಮ್ಮ ಪರಿಸರದ ಬಡ ಕುಟುಂಬಗಳು ಹೊಟ್ಟೆಗೆ ಹಿಟ್ಟು ಕಂಡುಕೊಳ್ಳಲು ಪರದಾಟ ನಡೆಸುತ್ತಿದ್ದ ಸ್ಥಿತಿಯನ್ನು ಕಂಡ ಲೋಕೇಶ್ ಆ ಕುಟುಂಬಗಳಿಗೆ ಏನಾದರೂ ಸಹಾಯ ಮಾಡಬೇಕು ಎನ್ನುವ ದೃಢ ಸಂಕಲ್ಪ ಮಾಡಿ ತಮ್ಮ ಸ್ನೇಹಿತ ವರ್ಗ ದ ಜೊತೆ ಸೇರಿ ಮಹತ್ವದ ಕಾರ್ಯ ಮಾಡಿದ್ದಾರೆ. ಕನಿಷ್ಠ 10 ದಿನಗಳಿಗೆ ಕುಟುಂಬವೊಂದರ ನಿರ್ವಹಣೆಗೆ ಅವಶ್ಯಕತೆ ಇರುವ ಕಿಟ್ ನೀಡಿದ್ದಾರೆ.
ಕಿಟ್ ನಲ್ಲಿವೆ ಅಗತ್ಯ ವಸ್ತುಗಳು
ಲೋಕೇಶ್ ವಿತರಣೆ ಮಾಡಿದ ಕಿಟ್‌ನಲ್ಲಿ ಒಂದು ವಿಶೇಷತೆ ಇದೆ. ಕೇವಲ ಕಾಟಾಚಾರದ ಪ್ರಚಾರಕ್ಕೆ ಅಷ್ಟೇ ಅವರು ಕಿಟ್ ಸಿದ್ದಪಡಿಸಿಲ್ಲ. ಮನೆಯೊಂದರ ದೈನಂದಿನ ಅಗತ್ಯತೆಗಳಿಗೆ ಬೇಕಾಗುವ ಅಕ್ಕಿ, ಒಣ ಮೆಣಸು, ಸಕ್ಕರೆ, ಟೀ ಪುಡಿ, ಮೆಣಸಿನ ಪುಡಿ, ಅಡುಗೆ ಎಣ್ಣೆ, ಉಪ್ಪು, ತೊಗರಿ ಬೇಳೆ, ಬೆಲ್ಲ, ಅರಶಿನ ಪುಡಿ, ಗೋಧಿ ಹಿಟ್ಟು, ಉದ್ದಿನ ಬೇಳೆ ಎಲ್ಲವೂ ಇದೆ.
ಸಾರ್ವಜನಿಕರಿಂದ ಮೆಚ್ಚುಗೆ
ಸದಾ ಒಂದಿಲ್ಲ ಒಂದು ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಲೋಕೇಶ್ , ತಾನು ಪ್ರತಿನಿಧಿಸುತ್ತಿರುವ ಕೋಟೇಶ್ವರ ಗ್ರಾಮ ಪಂಚಾಯಿತಿಯ 3 ನೇ ವಾರ್ಡ್ ಮತದಾರರ ಋಣ ತೀರಿಸಲು ಮಾಡುತ್ತಿರುವ ಮಾನವೀಯ ಕಾರ್ಯದ ಬಗ್ಗೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. ಇವರ ಜೊತೆಗೆ ಅಭಿಷೇಕ್ ಅಂಕದಕಟ್ಟೆ, ಪ್ರದೀಪ್ ಪೂಜಾರಿ, ಸದಾನಂದ ನಾಯಕ್, ಜಯಲಕ್ಷ್ಮೀ, ಹರೀಶ್ ಪೂಜಾರಿ ಇದ್ದಾರೆ.