ಚಾಮರಾಜನಗರ : ಕಾಡುಗಳ್ಳ ವೀರಪ್ಪನ್ ಹಾರಿಸಿದ್ದ ಗುಂಡುಗಳನ್ನು ತಲೆಯಲ್ಲಿ ಇಟ್ಟುಕೊಂಡೇ ಕರ್ತವ್ಯ ನಿರ್ವಹಿಸುತ್ತಿದ್ದ ಪಿ ಎಸ್ ಐ ಸಿದ್ಧರಾಜ ನಾಯಕ್ ಮಂಗಳವಾರ ವಿಧಿವಶರಾಗಿದ್ದಾರೆ. ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದಲ್ಲಿ ಪಿ ಎಸ್ ಐ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿಪರ್ಯಾಸವೆಂದರೆ ಸಿದ್ಧರಾಜು ನಾಯಕ್ ಸೇವೆಯಿಂದ ನಿವೃತ್ತರಾಗಲು 5 ದಿನವಷ್ಟೇ ಬಾಕಿ ಇತ್ತು.
ತಲೆಯಲ್ಲಿಯೇ ಇತ್ತು 3 ಗುಂಡು!
1992 ರ ಆಗಸ್ಟ್ 14 ರಂದು ವೀರಪ್ಪನ್ ನನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಮೀಣ್ಯಂನಲ್ಲಿ ನಡೆದಿದ್ದ ಗುಂಡಿನ ಕಾಳಗದಲ್ಲಿ ಸಿದ್ದರಾಜು ನಾಯಕ್ ಗೆ ಗುಂಡು ತಗುಲಿತ್ತು. ಎಸ್ಪಿ ಹರಿಕೃಷ್ಣ ಹಾಗೂ ಎಸ್ ಐ ಶಕೀಲ್ ಅಹಮದ್ ಜೊತೆ ಕಾರ್ಯಾಚರಣೆಯಲ್ಲಿ ಸಿದ್ಧರಾಜು ನಾಯಕ್ ಪಾಲ್ಗೊಂಡಿದ್ದು, ಈ ವೇಳೆ 7 ಗುಂಡುಗಳು ಅವರ ದೇಹ ಹೊಕ್ಕಿತ್ತು. ಶಸ್ತ್ರ ಚಿಕಿತ್ಸೆ ನಡೆಸಿ 4 ಗುಂಡುಗಳನ್ನು ತೆಗೆಯಲಾಗಿತ್ತು. ಆದರೆ, ಮೂರು ಗುಂಡುಗಳು ತಲೆಯಲ್ಲಿಯೇ ಉಳಿದಿತ್ತು. ಕಾರಣ ಅದನ್ನು ತೆಗೆದರೆ ಪ್ರಾಣ ಹೋಗುತ್ತೆ ಎಂದು ವೈದ್ಯರು ಹೇಳಿದ್ದರು ಎನ್ನಲಾಗಿದೆ. ಆಶ್ಚರ್ಯ ಎಂಬಂತೆ ಬದುಕಿದ್ದರು ಸಿದ್ಧರಾಜು ನಾಯಕ್.
ಕೊರೋನಾ ವಾರಿಯರ್ ಆಗಿ ಉತ್ತಮ ಸೇವೆ!
ಸಿದ್ಧರಾಜು ಣಾಯಕ್ 1985 ರಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಆಗಿ ಕರ್ತವ್ಯ ಆರಂಭಿಸಿದರು. ಹೆಡ್ ಕಾನ್ಸ್ ಸ್ಟೇಬಲ್ ಆಗಿ, ಎಎಸ್ ಐ ಆಗಿ, 2019 ರಲ್ಲಿ ಪಿಎಸ್ ಐ ಆಗಿ ಪ್ರೊಮೋಟ್ ಆಗಿದ್ದರು. ಅನಾರೋಗ್ಯದ ನಡುವೆಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ 75 ದಿನಗಳ ಕಾಲ ರಜಾ ಪಡೆಯದೆಯೇ ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ.