“ಇಡೀ ದೇಶ ಸಂಪೂರ್ಣವಾಗಿ ಹೇಗೆ ಕೋವಿಡ್ ವಿರುದ್ಧ ಹೋರಾಡುತ್ತಿದೆ ಎಂಬುದನ್ನು ನೋಡಿದ್ದೀರಿ. 100 ವರ್ಷದಲ್ಲಿಯೇ ಇದು ದೊಡ್ಡ ಸಾಂಕ್ರಾಮಿಕ ರೋಗವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಇಂದು ಮನ್ ಕೀ ಬಾತ್ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು.
“ಹಲವು ಚಂಡಮಾರುತ, ರೋಗಗಳು ದೇಶವನ್ನು ಕಾಡಿವೆ. ಈಗ ತಂತ್ರಜ್ಞಾನದ ಸಹಾಯದಿಂದಾಗಿ ಚಂಡಮಾರುತದಿಂದ ಆಗಿರುವಂತಹ ನಷ್ಟಗಳನ್ನು ಕಡಿಮೆ ಮಾಡಲು ಸಾಧ್ಯವಾಗಿದೆ. ತೌಕ್ತೆ, ಯಾಸ್ ಚಂಡಮಾರರುತವನ್ನು ನಾವು ಕಳೆದ 10 ದಿನದಲ್ಲಿ ಎದುರಿಸುತ್ತಿದ್ದೇವೆ” ಎಂದು ಪ್ರಧಾನಿ ಹೇಳಿದ್ದಾರೆ.
“ಸವಾಲು ಎಷ್ಟೇ ದೊಡ್ಡದಾಗಿರಲಿ ಅದರ ಜೊತೆ ಹೋರಾಡುವ ನಮ್ಮ ಸಾಮೂಹಿಕ ಶಕ್ತಿಯೂ ಅಷ್ಟೇ ದೊಡ್ಡದಾಗಿರುತ್ತದೆ. ವೈದ್ಯರು, ನರ್ಸ್ ಗಳು 24 ಗಂಟೆಗಳ ಕಾಲ ಜನರ ಜೀವ ಉಳಿಸಲು ಹೋರಾಡುತ್ತಿದ್ದಾರೆ” ಎಂದು ಈ ವೇಳೆ ಅವರು ಹೇಳಿದರು.
ಮಹಿಳಾ ಲೊಕೋ ಪೈಲಟ್ ನ್ನು ಶ್ಲಾಘಿಸಿದ ಮೋದಿ
ಆಕ್ಸಿಜನ್ ಉತ್ಪಾದನೆ ಮತ್ತು ಅದರ ಸಾಗಣೆ ಬಹಳ ಅಪಾಯಕಾರಿ ಕೆಲಸ. ಟ್ಯಾಂಕರ್ ಡ್ರೈವರ್ ಗಳು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಅಲ್ಲದೇ 15 ವರ್ಷಗಳಿಂದ ಟ್ಯಾಂಕರ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಉತ್ತರ ಪ್ರದೇಶದ ದಿನೇಶ್ ಉಪಧ್ಯಾಯ್ ಜೊತೆ ಸಂವಾದ ನಡೆಸಿದರು.
ವೈದ್ಯಕೀಯ ಆಕ್ಸಿಜನ್ ಹೊತ್ತ ಆಕ್ಸಿಜನ್ ರೈಲನ್ನು ಕೆಲ ದಿನಗಳ ಹಿಂದೆ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಹೊತ್ತು ತಂದಿದ್ದರು. ರೈಲನ್ನು ಚಲಾಯಿಸಿಕೊಂಡು ಬಂದ ಲೊಕೋ ಪೈಲಟ್ ಶಿರಿಶಾ ಗಜ್ನಿ ಜೊತೆ ಸಂವಾದ ನಡೆಸಿದ ಮೋದಿ ಅವರ ಕಾರ್ಯವನ್ನು ಶ್ಲಾಘಿಸಿದರು.
ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು, ರಸ್ತೆಯ ಮೂಲಕ ಪ್ರಯಾಣಿಸುವ ಆಮ್ಲಜನಕ ಟ್ಯಾಂಕರ್ ಗಳಿಗಿಂತ ವೇಗವಾಗಿ ದೇಶದ ಎಲ್ಲಾ ಮೂಲೆಗಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಸಾಗಿಸಿದೆ. ಒಂದು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲನ್ನು ಮಹಿಳೆಯರಿಂದ ಸಂಪೂರ್ಣವಾಗಿ ನಡೆಸಲಾಗುತ್ತಿದೆ ಎಂದು ಕೇಳಿದಾಗ ತಾಯಂದಿರು ಮತ್ತು ಸಹೋದರಿಯರುಹೆಮ್ಮೆ ಪಡುತ್ತಾರೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ಕೋವಿಡ್ ಸಂಕಷ್ಟ ಸಮಯದಲ್ಲಿ ಜನರ ಪರವಾಗಿ ಕೆಲಸ ಮಾಡುವ ಸ್ಪೂರ್ತಿಯನ್ನು ನಾನು ಪೋಷಕರಿಂದ ಪಡೆದುಕೊಂಡೆ. ಜನರ ಜೀವ ಉಳಿಸುವ ಕೆಲಸ ಮಾಡುತ್ತಿರುವ ಭಾಗವಾಗಿರುವುದಕ್ಕೆ ನಮಗೆ ಖುಷಿಯಿದೆ. ದೇವರ ಆಶೀರ್ವಾದವಿದು ಎಂದು ಶಿರಶಾ ಸಂವಾದದಲ್ಲಿ ತಿಳಿಸಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಎ.ಕೆ.ಪಟ್ನಾಯಕ್, ಲ್ಯಾಬ್ ಟೆಕ್ನಿಷಿಯನ್ ದೆಹಲಿಯ ಕಂಡ್ ಪಾಲ್ ಕೂಡ ಸಂವಾದದಲ್ಲಿ ಮಾತನಾಡಿದರು.