ವರದಿ: ಬಿ.ಎಸ್.ಆಚಾರ್ಯ
ಉಡುಪಿ : ಉಡುಪಿ ವಿಧಾನಸಭಾ ಕ್ಷೇತ್ರ ಹಡಿಲು ಭೂಮಿಯಲ್ಲಿ ಭತ್ತದ ಬೆಳೆಯನ್ನು ಬೆಳೆಯುವ ಮೂಲಕ ರಾಜ್ಯದಲ್ಲಿ ಮಾದರಿಯಾಗಲಿದೆ. ಕೇದಾರೋತ್ಥಾನ ಟ್ರಸ್ಟ್ ಹಡಿಲು ಭೂಮಿ ಕೃಷಿ ಯೋಜನೆ ಮೂಲಕ ಇಂತಹುದೊಂದು ಕೃಷಿ ಯಜ್ಞ ಕಾರ್ಯ ಆರಂಭವಾಗಿದೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈ ಯೋಜನೆಯ ನಾಟಿಗೆ ವಿಶಾಲವಾದ ಜಾಗದಲ್ಲಿ ಯಾಂತ್ರೀಕೃತವಾಗಿ ಚಾಪೆ ನೇಜಿ ಸಿದ್ಧಗೊಂಡು ನಾಟಿಗೆ ತಯಾರಾಗಿದೆ.
ಜೂನ್ 5 ರಂದು ವಿಶ್ವಪರಿಸರ ದಿನಾಚರಣೆಯಂದು ಕಡೆಕಾರ್ ಗ್ರಾಮ ಪಂಚಾಯಿತಿಯ ಕುತ್ಪಾಡಿಯಲ್ಲಿ ಕೃಷಿ ಭೂಮಿಯಲ್ಲಿ ನಾಟಿ ಕಾರ್ಯಕ್ಕೆ ಚಾಲನೆ ನೀಡಲಾಗಿ ಈ ವರ್ಷ 2ಸಾವಿರ ಎಕರೆಗೂ ಅಧಿಕ ಹಡಿಲು ಭೂಮಿಯಲ್ಲಿ ಕೃಷಿ ಮಾಡಲಿದ್ದು, ರೂ.5 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆ ರೂಪಿಸಿ, ಈಗಾಗಲೇ 300ಕಿ.ಮೀ ಉದ್ದದ ತೋಡುಗಳ ಹೂಳನ್ನು ತೆಗೆಯಲಾಗಿದೆ ಎಂದು ಶಾಸಕ ರಘುಪತಿ ಭಟ್ ಮಾಹಿತಿ ನೀಡಿದ್ದಾರೆ.
ಬಹುತೇಕ ಸಾವಯವ ಕೃಷಿ ಮಾಡುತ್ತಿದ್ದು, ನಾಟಿ ಮತ್ತು ಕಟಾವಿಗಾಗಿ ತಮಿಳುನಾಡಿನಿಂದ 5 ಮತ್ತು ಇತರೆಡೆಯಿಂದಲೂ ಒಟ್ಟು 13 ಯಂತ್ರಗಳನ್ನು ಬಳಿಸಿಕೊಂಡು ನಾಟಿ ಕಾರ್ಯ ಮಾಡಲಾಗುವುದು. ಜಿಲ್ಲೆಯಲ್ಲಿ 5 ಸಾವಿರಕ್ಕಿಂತಲೂ ಅಧಿಕ ಹಡಿಲು ಭೂಮಿ ಇದ್ದು, ಮುಂದಿನ ವರ್ಷಗಳಲ್ಲಿ ಈ ಯೋಜನೆಯ ಮೂಲಕ ಉಳಿದ ಹಡಿಲು ಭೂಮಿಯ ಕೃಷಿ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಈ ವೇಳೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ, ಡಾ.ಶಂಕರ್ ಚಾಪೆ ನೇಜಿ ತಯಾರಿ ಮತ್ತು ನಾಟಿ ಕಾರ್ಯವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಈ ಸಂದರ್ಭ
ಕೃಷಿ ಇಲಾಖೆಯ ಉಪನಿರ್ದೇಶಕ ಕೆಂಪೇಗೌಡ, ವಲಯ ಕೃಷಿ ತೋಟಗಾರಿಕೆ ಸಂಶೋಧನಾ ಕೇಂದ್ರದ ಡಾ.ಲಕ್ಷ್ಮಣ್, ಕೆ.ವಿ.ಕೆಯ ಮುಖ್ಯಸ್ಥ ಡಾ.ಧನಂಜಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದಿನಕರ ಬಾಬು, ಟ್ರಸ್ಟ್‍ನ ಕಾರ್ಯದರ್ಶಿ ಮುರಳಿ ಕಡೇಕಾರ್, ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.