ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಸಂಘಟನೆಯಿಂದ ನಮ್ಮ ಕುಟುಂಬಕ್ಕೆ ಸಾಕಷ್ಟು ಅವಕಾಶಗಳು ದೊರೆಕಿದೆ. ವಿಜಯೇಂದ್ರ ಅವರನ್ನು ಉಪ ಮುಖ್ಯಮಂತ್ರಿ ಮಾಡುತ್ತಾರೆ, ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನುವುದು ಸುಳ್ಳು ಸುದ್ದಿ. ವೈಯಕ್ತಿಕ ಕೆಲಸಗಳಿಗಾಗಿ ಬಿ.ವೈ. ವಿಜಯೇಂದ್ರ ಅವರು ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರ ನೆಲೆಯಲ್ಲಿ ಪಕ್ಷದ ಹಿರಿಯರನ್ನು ಭೇಟಿಯಾಗಿದ್ದಾರೆಯೇ ಹೊರತು ಇದಕ್ಕೆ ರಾಜಕೀಯ ಕಾರಣಗಳು ಇಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಸ್ವಷ್ಟಪಡಿಸಿದರು.
ಇಲ್ಲಿನ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೈಂದೂರು ಕ್ಷೇತ್ರಕ್ಕೆ ಮಂಜೂರಾಗಿರುವ 396 ಕೋಟಿ ವೆಚ್ಚದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಆಗಿ ಕಾಮಗಾರಿ ಪ್ರಾರಂಭವಾಗಲಿದ್ದು, ಇನ್ನೂ 2 ವರ್ಷದಲ್ಲಿ ಜನರಿಗೆ ನೀರು ದೊರಕುವ ವಿಶ್ವಾಸ ಇದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರ್ಕಾರವೇ ವಹಿಸಿಕೊಂಡಿದೆ. ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಸ್ಪಂದಿಸುವ ಕೆಲಸ ಸರ್ಕಾರದಿಂದ ಆಗುತ್ತಿದೆ. ಬೈಂದೂರು-ಕೊಲ್ಲೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯ ಘಾಟಿ ಪ್ರದೇಶಕ್ಕೆ ಪರ್ಯಾಯ ರಸ್ತೆ ನಿರ್ಮಾಣಕ್ಕಾಗಿ ಹಾಗೂ ಬಾಳೆಬರೆ ಘಾಟಿ ರಸ್ತೆ ಅಭಿವೃದ್ಧಿಗಾಗಿ ಅನುದಾನವನ್ನು ಜೋಡಣೆ ಮಾಡಲಾಗಿದ್ದು, ಇದರಿಂದ ಶಿವಮೊಗ್ಗ-ಬೈಂದೂರು ಪ್ರಯಾಣದ ದೂರ ಕಡಿಮೆಯಾಗಿ ಪ್ರಯಾಸ ರಹಿತ ಪ್ರಯಾಣ ದೊರಕಲಿದೆ ಎಂದರು.
ಆಕಸ್ಮಾತ್ ಸೌಕೂರು ಏತ ನೀರಾವರಿ ಯೋಜನೆಯ ಮೂಲನಕ್ಷೆ ಬದಲಾವಣೆಯಾಗಿದೆ ಎಂದಾದರೆ ಈ ಬಗ್ಗೆ ಪರಿಶೀಲನೆ ಮಾಡೋಣ. ಕುಡಿಯಲು ಹಾಗೂ ಕೃಷಿಗೆ ನೀರು ನೀಡಲು ಸೌಕೂರು ಹಾಗೂ ಸಿದ್ದಾಪುರ ಎರಡು ಯೋಜನೆಗಳು ಆಗಬೇಕು ಎನ್ನುವುದು ನಮ್ಮ ಉದ್ದೇಶ ಹೇಳಿದರು.
ಉದಯ್ ಗಾಣಿಗ ಕೊಲೆ ಪ್ರಕರಣದಲ್ಲಿ ಹಸ್ತಕ್ಷೇಪ ಇಲ್ಲ
ಕಾನೂನು-ಸುವ್ಯವಸ್ಥೆಗೆ ಹೆಸರಾಗಿರುವಂತಹ ಬೈಂದೂರು ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಈ ಕೊಲೆ ಪ್ರಕರಣ ತನಿಖೆಯ ಹಂತದಲ್ಲಿ ಇರುವುದರಿಂದ ಆರೋಪ ಹೊತ್ತಿರುವವರು ಎಲ್ಲಿ ಸಿಕ್ಕಿದ್ದಾರೆ, ಏನು ಮಾಡುತ್ತಿದ್ದಾರೆ ಅನ್ನೋದಕ್ಕಿಂತ ಉದಯ್ ಕುಟುಂಬಕ್ಕೆ ನ್ಯಾಯ ಸಿಗುವುದು ಮುಖ್ಯ. ಆರೋಪಿಗಳು ಎಲ್ಲಿ ಸಿಕ್ಕಿದ್ದಾರೆ ಎನ್ನುವುದು ಮುಖ್ಯವಲ್ಲ. ಮೃತರಾದ ವ್ಯಕ್ತಿ ನಮ್ಮ ಪಕ್ಷದ ಕಾರ್ಯಕರ್ತರು. ಕೊಲೆ ಆರೋಪವೂ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಬಂದಿದೆ. ಈ ಪ್ರಕರಣ ತನಿಖೆಯ ಹಂತದಲ್ಲಿ ಇರುವುದರಿಂದ ಅವರು ಎಲ್ಲಿ ಸಿಕ್ಕಿದ್ದಾರೆ, ಏನು ಮಾಡುತ್ತಿದ್ದಾರೆ ಅನ್ನೋದಕ್ಕಿಂತ ಉದಯ್ ಕುಟುಂಬಕ್ಕೆ ನ್ಯಾಯ ಸಿಗುವುದು ಮುಖ್ಯ. ಯಾವುದೇ ಭಯ, ಹಿಂಜರಿಕೆ ಇಟ್ಟುಕೊಳ್ಳದೆ ಯಾರು ತಪ್ಪು ಮಾಡಿದ್ದಾರೆಯೋ ಅವರು ಒಪ್ಪಿಕೊಳ್ಳಲೇಬೇಕು. ಪ್ರಕರಣ ತನಿಖೆಯ ಹಂತದಲ್ಲಿ ಇದೆ, ಯಾವುದೆ ಹಸ್ತಕ್ಷೇಪಗಳು ಆಗಿಲ್ಲ ಎಂದರು.
ಏತ ನೀರಾವರಿ ಯೋಜನೆಯ ನಕ್ಷೆ ಬದಲಾವಣೆ ಸಾಧ್ಯವಿಲ್ಲ : ಶಾಸಕ ಸುಕುಮಾರ್ ಶೆಟ್ಟಿ
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಸಂಸದರು ಮತ್ತು ನಾವೇ ಒಟ್ಟಾಗಿ ಸೌಕೂರು ಏತ ನೀರಾವರಿ ಯೋಜನೆಯನ್ನು ನಕ್ಷೆ ತಯಾರಿಸಿ, ಪ್ರಾಸ್ತಾವನೆ ಮಂಡಿಸಿ ಮಂಜೂರಾತಿ ಮಾಡಿಸಿರುವುದರಿಂದ ನಕ್ಷೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಸಂಸದರು,ಒಂದು ವೇಳೆ ಬದಲಾವಣೆಯಾಗಿದೆ ಎಂದಾದರೆ ಈ ಬಗ್ಗೆ ಪರಿಶೀಲನೆ ಮಾಡೋಣ. ಇದರಲ್ಲಿ ಯಾವುದೆ ದುರುದ್ದೇಶ ಅಥವಾ ಸ್ವಾರ್ಥ ಇಲ್ಲ. ಶಾಸಕರ ತೋಟಕ್ಕೆ ನೀರು ಹಾಯಿಸಿಕೊಳ್ಳಬೇಕು ಎನ್ನುವ ದುರುದ್ದೇಶಗಳೂ ಇಲ್ಲ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದರು.