ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಿ, ರಾಜ್ಯ ಭಾಷೆ ಎಂದು ಘೋಷಿಸ ಬೇಕು ಎಂದು ಆಗ್ರಹಿಸಿ ಟ್ವಿಟ್ಟರ್ ಅಭಿಯಾನ ಆರಂಭಗೊಂಡಿದೆ. ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ ಸಾವಿರಾರು ಟ್ವೀಟ್ ಗಳ ಮಹಾಪೂರವೇ ಹರಿದು ಬಂದಿವೆ. ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಬೇಕೆಂಬ ಒಕ್ಕೊರಲ ದನಿ ಕೇಳಿ ಬಂದಿದೆ.
ಹಲವು ವರ್ಷಗಳ ಕೂಗು
ಪಂಚದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಯೂ ಒಂದು. ತನ್ನದೇ ಆದ ಇತಿಹಾಸವಿದೆ. ತುಳು ಭಾಷೆಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳೂ ಲಭ್ಯವಿದೆ. ತನ್ನದೇ ಆದ ಲಿಪಿ ಇದೆ. ಒಂದು ರಾಜ್ಯ ಭಾಷೆಯಾಗುವ ಎಲ್ಲಾ ಅರ್ಹತೆಗಳೂ ತುಳು ಭಾಷೆಗಿದೆ ಎಂಬ ಕೂಗು ಇವತ್ತು, ನೆನ್ನೆಯದಲ್ಲ, ಹಲವು ವರ್ಷಗಳದ್ದು. ಸರ್ಕಾರ ಭರವಸೆ ಇತ್ತಿತ್ತಾದರೂ ಅದೂ ಇದುವರೆಗೂ ಈಡೇರದೇ ಹೋಗಿರುವುದು ದುರಂತ. ಹಾಗಾಗಿ ಮತ್ತೆ ಮತ್ತೆ ಈ ಕೂಗು ಜೋರಾಗುತ್ತಿದೆ. ಈ ಬಾರಿ ಟ್ವಿಟ್ಟರ್ ಅಭಿಯಾನದ ಮೂಲಕ ಸರ್ಕಾರದ ಕದ ತಟ್ಟುತ್ತಿದ್ದಾರೆ ತುಳುವರು.
ಈ ಅಭಿಯಾನದಲ್ಲಿ ಶಾಸಕರು, ತುಳುನಾಡ ನಟರು, ರಾಜಕೀಯ ಮುಖಂಡರು ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಕೈ ಜೋಡಿಸಿವೆ.