ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ವಿಶ್ವಗುರು ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಗೆ ಹಳ್ಳಿಯ ಜನರ ಕಷ್ಟ ಗೊತ್ತಿಲ್ಲ, ಪ್ರತಿದಿನವೂ ಪೆಟ್ರೋಲ್ ಬೆಲೆ ಏರಿಕೆ ಮಾಡುತ್ತಿದ್ದಾರೆ. ಈಗ 100 ರೂಪಾಯಿ ಆಗಿದೆ. ಡಿಸೇಲ್ ದರವೂ 90 ದಾಟಿವೆ. ಇದರಿಂದ ಎಲ್ಲ ದಿನಬಳಕೆಯ ವಸ್ತುಗಳ ದರಗಳು ಏರಿಕೆಯಾಗಿ ಜನ ಬದುಕುವುದುದೇ ಕಷ್ಟವಾಗಿದೆ. ಶೀಘ್ರವಾಗಿ ತೈಲ ಬೆಲೆಯನ್ನು ಕಡಿಮೆ ಮಾಡಿ ಜನರನ್ನು ಬದುಕಲು ಬಿಡಿ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಒತ್ತಾಯಿಸಿದರು.
ಅವರು ಸೋಮವಾರ ಮುನಿಯಾಲು ಮತ್ತು ಅಜೆಕಾರು ಪೆಟ್ರೋಲ್ ಪಂಪ್ ಎದುರು ಕೇಂದ್ರ ಸರ್ಕಾರ ವಿರುದ್ಧ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ನರೇಂದ್ರ ಮೋದಿ ಗುಜರಾತಿಗೆ ಸಿಮೀತವಾದ ಪ್ರಧಾನಿಯಾಗಿದ್ದಾರೆ. ಎಲ್ಲವನ್ನೂ ಗುಜರಾತಿಗೆ ನೀಡುತ್ತಿದ್ದಾರೆ. ಬೇರೆ ರಾಜ್ಯದವರು ಅವರಿಗೆ ಬೇಡ, ಅದಾನಿ, ಅಂಬಾನಿ ಮತ್ತು ನೀರವ್ ಮೋದಿ ಬೆಂಬಲಿತ ಸರ್ಕಾರವಾಗಿ ಕೇಂದ್ರ ಸರ್ಕಾರ ಮಾರ್ಪಾಟ್ಟಿದೆ ಎಂದು ದೂರಿದರು.
ಪೆಟ್ರೋಲ್ ಪಂಪಿನಲ್ಲಿ ಗ್ರಾಹಕರಿಗೆ ಮತ್ತು ನೌಕರರಿಗೆ ಸಿಹಿ ಹಂಚಿ ಪೆಟ್ರೋಲ್ ದರ 100 ರೂಪಾಯಿ ದಾಟಿದ್ದನ್ನು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಅಜೆಕಾರು ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಆಸ್ಟಿನ್ ರಾಡ್ರೀಗಸ್, ಪ್ರಮುಖರಾದ ಪ್ರಕಾಶ ಪೂಜಾರಿ ಕೆರ್ವಾಸೆ, ಗಫೂರ್, ಸುನೀತಾ ಶೆಟ್ಟಿ, ಯಶೋದ ಶೆಟ್ಟಿ, ಜಾನ್ ಟೆಲ್ಲಿಸ್, ಜಾನ್ ಡಿಸೋಜ, ಚರಿತಾ, ಮುದ್ರಾಡಿಯ ಶಶಿಕಲಾ ಪೂಜಾರಿ, ವರಂಗ ಲಕ್ಷ್ಮಣ ಆಚಾರ್, ಉದಯ ನಾಯ್ಕ್ ಮುನಿಯಾಲು, ಸುಂದರ ಪೂಜಾರಿ, ಅಶ್ವಿನಿ ಮುದ್ರಾಡಿ, ಗಣೇಶ ಶೇರಿಗಾರ್ ಹೆಬ್ರಿ, ಹೆಬ್ರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ, ಸದಾನಂದ ಆಚಾರ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪ್ರಮುಖರು ಭಾಗವಹಿಸಿದ್ದರು.