ವರದಿ: ಶಫೀ ಉಚ್ಚಿಲ
ಕಟಪಾಡಿ: ಶಂಕರಪುರ ಶಿವಾನಂದ ನಗರದ ನಿವಾಸಿ ಪ್ರೇಮಾ ಎಂಬ ಅಸಹಾಯಕ ವೃದ್ಧ ಮಹಿಳೆಗೆ
ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಟಪಾಡಿಯ “ಸತ್ಯದ ತುಳುವೆರ್” ಸಂಸ್ಥೆ, ನೂತನ ಮನೆಯೊಂದನ್ನು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ.
ತೀರಾ ಬಡತನದಲ್ಲಿದ್ದ ಪ್ರೇಮ, ಗಂಡ ತೀರಿಹೊದ ಬಳಿಕ ಮಗನೊಂದಿಗೆ ಶಂಕರಪುರದ ಶಿವಾನಂದ ನಗರದಲ್ಲಿರುವ ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಹಳೆಯದಾದ ಪುಟ್ಟ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಇವರ ಮನೆಯ ಸ್ಥಿತಿಗತಿ ಅರಿತ ‘ಸತ್ಯದ ತುಳುವೆರ್ ಸಂಸ್ಥೆ’ ದಾನಿಗಳ ಸಹಕಾರದಿಂದ ಯುವಕರ ತಂಡ ಕಾಮಗಾರಿಗಿಳಿದು ನೂತನ ಮನೆಯೊಂದನ್ನು ನಿರ್ಮಿಸಿ ಹಸ್ತಾಂತರಿಸಿದೆ.
‘ಸತ್ಯದ ತುಳುವೆರ್ ಸಂಸ್ಥೆ’ಯ 21ನೇ ಕಾರ್ಯಕ್ರಮ ಇದಾಗಿದ್ದು, ಈ ಬಗ್ಗೆ ಸಂಸ್ಥೆಯ ಸಂಸ್ಥಾಪಕ ಪ್ರವೀಣ್ ಕುರ್ಕಾಲು ಮಾಹಿತಿ ನೀಡಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷೆ ಗೀತಾಂಜಲಿ ಸುವರ್ಣ ಮಾತನಾಡಿ, ಪಂಚಾಯತ್ ವತಿಯಿಂದ ಈ ಬಡ ಮಹಿಳೆಗೆ ಯಾವುದೇ ಅನುದಾನ ಬಂದಿಲ್ಲ.ಈ ನಿಟ್ಟಿನಲ್ಲಿ ಯುವಕರ ತಂಡ ಹೊಸ ಮನೆ ನಿರ್ಮಿಸಿ ಕೊಟ್ಟಿದೆ ಎಂದು ಗ್ರಾ.ಪಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೇಮಾ, ನನ್ನ ಮನೆ ಸಂಪೂರ್ಣ ಕುಸಿದು ಬೀಳುವ ಸ್ಥಿತಿಯಲ್ಲಿತ್ತು.
ನನ್ನ ಕಷ್ಟವನ್ನು ಅರಿತ ಸಂಸ್ಥೆಯವರು ನನಗೆ ಹೊಸ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಎಂದು ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಬಂಗೇರ, ಕಾರ್ಯದರ್ಶಿ ಮನೀಶ್ ಕುಲಾಲ್, ಕೋಶಾಧಿಕಾರಿ ಶಿವಪ್ರಸಾದ್ ಮತ್ತು ಸಂಸ್ಥೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.