ಉಚ್ಚಿಲ : ರಾಷ್ಟ್ರೀಯ ಹೆದ್ದಾರಿ 66ರ ರಸ್ತೆಯ ಇಕ್ಕೆಲದಲ್ಲಿ ತ್ಯಾಜ್ಯ ಸುರಿದು ಪರಾರಿಯಾಗಲು ಯತ್ನಿಸಿದ ಲಾರಿಯನ್ನು ತಡೆದು ದಂಡ ವಿಧಿಸಿದ ಘಟನೆ ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಹೊಟೇಲೊಂದರ ಬಳಿ ನಡೆದಿದೆ.
ಇಂದು ಸಂಜೆ ಹುಬ್ಬಳ್ಳಿಯಿಂದ ಬಂದ ಲಾರಿ, ಮಂಗಳೂರಿನ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಲೋಡ್ ಇಳಿಸಿದ ಬಳಿಕ, ಚಾಲಕ ಮರಳಿ ಹುಬ್ಬಳ್ಳಿಯತ್ತ ಸಾಗುತ್ತಿದ್ದಾಗ ಉಚ್ಚಿಲದ ರಾ.ಹೆ. ಬಳಿ ಕೊಳೆತು ಹೋದ ಕಲ್ಲಂಗಡಿ ಹಣ್ಣುಗಳನ್ನೆಲ್ಲ ಸುರಿದು ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಗ್ರಾಪಂ ಸದಸ್ಯ ಸಹಿತ ಸಾರ್ವಜನಿಕರು ಲಾರಿ ತಡೆದಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪಂಚಾಯಿತಿ ಸಿಬ್ಬಂದಿ, ದಂಡ ವಿಧಿಸಿ ಸುರಿದ ತ್ಯಾಜ್ಯವನ್ನು ಮತ್ತೆ ಲಾರಿಗೆ ತುಂಬಿಸಿ ಕೊಂಡೊಯ್ಯಲು ಹೇಳಿ, ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ಸ್ಥಳದಲ್ಲಿದ್ದ ಗ್ರಾಪಂ ಸದಸ್ಯ ಮಜೀದ್ ಪೊಲ್ಯ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಸ್ಥಳ ಇಲ್ಲ. ಇಂತಹ ಸಂದರ್ಭ ವಾಹನ ಚಾಲಕರು ಕೋಳಿ ಇನ್ನಿತರ ತ್ಯಾಜ್ಯ ಸುರಿದು ಪರಾರಿಯಾಗುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ಯಾರೇ ತ್ಯಾಜ್ಯ ತಂದು ಹಾಕಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಗ್ರಾಪಂ ಸದಸ್ಯ ಶಿವಕುಮಾರ್, ಸಿಬ್ಬಂದಿ ರಮೇಶ್, ಸ್ಥಳೀಯರಾದ ಕಿಶೋರ್ ಉಪಸ್ಥಿತರಿದ್ದರು.