ಅಥ್ಲೆಟಿಕ್ಸ್ ಲೆಜೆಂಡ್, ಪ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ವಿಧಿವಶರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಕೊರೋನಾ ಸೋಂಕಿನಿಂದ ಒಂದು ತಿಂಗಳ ಕಾಲ ಅವರು ಹೋರಾಡಿ ಜೂ.16 ರಂದು ಐಸಿಯುನಿಂದ ಹೊರಬಂದಿದ್ದರು. ಆದರೆ, ಜೂ.18 ರಂದು ರಾತ್ರಿ ವಿಧಿವಶರಾಗಿದ್ದಾರೆ.
ಜೂ.14 ರಂದು ಮಿಲ್ಖಾ ಸಿಂಗ್ ಪತ್ನಿ, ಭಾರತ ಮಹಿಳಾ ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರು.
ಕಾಮನ್ ವೆಲ್ತ್ ಗೇಮ್ ಚಾಂಪಿಯನ್
ಮಿಲ್ಖಾ ಸಿಂಗ್ ನಾಲ್ಕು ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 1958 ರ ಕಾಮನ್ ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿ ಭಾರತ ಹೆಮ್ಮೆ ಪಡುವಂತೆ ಮಾಡಿದ್ದರು. 1960 ರ ರೋಮ್ ಒಲಂಪಿಕ್ಸ್ ನಲ್ಲಿ 400 ಮೀಟರ್ ಫೈನಲ್ ಗಳಲ್ಲಿ ನಾಲ್ಕನೇ ಸ್ಥಾನ ಗೆದ್ದಿದ್ದರು. 1956 ಮತ್ತು 1964ರ ಒಲಂಪಿಕ್ಸ್ ನಲ್ಲಿ ಮಿಲ್ಖಾ ಭಾರತವನ್ನು ಪ್ರತಿನಿಧಿಸಿದ್ದರು. ಇವರ ಸಾಧನೆಗೆ 1959 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿದೆ.
ಭಾಘ್ ಮಿಲ್ಖಾ ಭಾಘ್
ನವೆಂಬರ್ 20. 1928ರಂದು ಈಗಿನ ಪಾಕಿಸ್ತಾನದ ಗೋಬಿಂದ್ ಪುರದಲ್ಲಿ ಅವರು ಜನಿಸಿದ್ದರು. ದೇಶ ಇಬ್ಭಾಗದ ವೇಳೆ ತಂದೆ – ತಾಯಿಯನ್ನು ಅವರು ಕಳೆದುಕೊಂಡಿದ್ದರು. ಮಿಲ್ಖಾ ಸಿಂಗ್ ಜೀವನಾಧಾರಿತ `ಭಾಘ್ ಮಿಲ್ಖಾ ಭಾಘ್’ ಚಿತ್ರ ತೆರೆಕಂಡು ಬ್ಲಾಕ್ ಬಾಸ್ಟರ್ ಹಿಟ್ ಕೂಡ ಆಗಿದೆ.
ಪ್ರಧಾನಿ ಸಂತಾಪ
ಅಥ್ಲೆಟಿಕ್ಸ್ ದಿಗ್ಗಜನ ನಿಧನಕ್ಕೆ ಅಭಿಮಾನಿಗಳು, ಗಣ್ಯರು, ಸಿನಿಮಾ ನಟರು, ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಮಿಲ್ಖಾ ಸಿಂಗ್ ಅವರು ಪುತ್ರ ಪದ್ಮಶ್ರೀ ಪುರಸ್ಕøತ ಮಾಜಿ ಅಥ್ಲೀಟ್, ಗಾಲ್ಫರ್ ಜೀವ್ ಸಿಂಗ್ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.