ಕಾಪು : ಕುಂಜೂರು ಶ್ರೀ ದುರ್ಗಾ ಸೇವಾ ಸಮಿತಿಯ ವತಿಯಿಂದ ಎಲ್ಲೂರು ಮತ್ತು ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಸಮುದಾಯದ ಕುಟುಂಬಗಳಿಗೆ ರವಿವಾರ ಚಾಪೆ, ಬೆಡ್ಶೀಟ್ ಮತ್ತು ಕೊಡೆ ಮುಂತಾದ ಸವಲತ್ತುಗಳನ್ನು ವಿತರಿಸಲಾಯಿತು.
ಸವಲತ್ತು ವಿತರಣೆಗೆ ಚಾಲನೆ ನೀಡಿದ ಸೇವಾ ಸಮಿತಿಯ ಅಧ್ಯಕ್ಷ ಕೆ. ಎಲ್. ಕುಂಡಂತಾಯ ಮಾತನಾಡಿ, ಕುಂಜೂರು ಶ್ರೀ ದುರ್ಗಾ ದೇವಿಯ ಸನ್ನಿಧಿಯಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸೇವಾ ಕಾರ್ಯಗಳನ್ನು ನಡೆಸುವ ಸದುದ್ದೇಶದೊಂದಿಗೆ ಪ್ರಾರಂಭಿಸಲಾಗಿರುವ ಸೇವಾ ಸಮಿತಿಯ ಮೂಲಕ ನಡೆಸಲಾಗಿರುವ ತ್ರಿಕಾಲ ಪೂಜೆ ಸೇವೆ ನಡೆಸಿ, ಉಳಿಕೆಯಾದ ದೇಣಿಗೆಯನ್ನು ಸಾಮಾಜಿಕ ಸೇವಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಇದು ಪ್ರಥಮ ಯೋಜನೆಯಾಗಿದ್ದು ಮುಂದೆ ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು.
ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಭಂಡಸಾಲೆ, ಎಲ್ಲೂರು, ಇರಂದಾಡಿ, ಗುತ್ತಬೆಟ್ಟು ಮತ್ತು ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಿಯೂರು ಕೊರಗ ಕಾಲೊನಿ (ಪರಿಶಿಷ್ಟ ಪಂಗಡ) ಗಳಲ್ಲಿ ವಾಸಿಸುತ್ತಿರುವ 19 ಕೊರಗ ಕುಟುಂಬಗಳ 90 ಮಂದಿ ಫಲಾನುಭವಿಗಳ ಮನೆಗೆ ತೆರಳಿ ಚಾಪೆ, ಬೆಡ್ ಶೀಟ್ ಮತ್ತು ಕೊಡೆ ವಿತರಿಸಲಾಯಿತು.
ಕುಂಜೂರು ಶ್ರೀ ದುರ್ಗಾ ಸೇವಾ ಸಮಿತಿಯ ಕೋಶಾಧಿಕಾರಿ ಶ್ರೀವತ್ಸ ರಾವ್ ಕುಂಜೂರು, ಜೊತೆ ಕಾರ್ಯದರ್ಶಿ ರಾಕೇಶ್ ಕುಂಜೂರು, ಸಂಘಟನಾ ಕಾರ್ಯದರ್ಶಿ ಸತೀಶ್ ಶೆಟ್ಟಿ ಕುಂಜೂರು, ಎಲ್ಲೂರು ಗ್ರಾ. ಪಂ. ಸದಸ್ಯ ಸಂತೋಷ್ ಶೆಟ್ಟಿ, ಶ್ರೀ ದುರ್ಗಾ ದೇವಸ್ಥಾನದ ಪ್ರಬಂಧಕ ರಾಘವೇಂದ್ರ ಶೆಟ್ಟಿ, ಶ್ರೀ ದುರ್ಗಾ ಮಿತ್ರ ವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ಸಮಿತಿ ಸದಸ್ಯರಾದ ಭಾರ್ಗವ ಎಲ್. ಕುಂಡಂತಾಯ, ರಾಜ ಶೆಟ್ಟಿ ಗೆರಪಾಯಿಮನೆ ಮೊದಲಾದವರು ಉಪಸ್ಥಿತರಿದ್ದರು.