ವರದಿ : ದಿನೇಶ್ ರಾಯಪ್ಪನ ಮಠ
ಬೈಂದೂರು: ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳನ್ನು ಒಳಗೊಂಡಿರುವ ಬೈಂದೂರು ತಾಲೂಕಿನ ಬಹಳಷ್ಟು ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇದ್ದು, ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಲು ನೆಟ್ ವರ್ಕ್ ಆಪರೇಟರ್ ಗಳ ಸಭೆಯನ್ನು ಬೈಂದೂರು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ವಂಡ್ಸೆಯ ನಿವಾಸದಲ್ಲಿ ನಡೆಸಿದರು.
ಪ್ರಸ್ತುತ ಲಾಕ್‌ಡೌನ್ ನಿಂದಾಗಿ ಎಲ್ಲಾ ಶಾಲಾ ಕಾಲೇಜುಗಳ ಶಿಕ್ಷಣ ಆನ್‌ಲೈನ್ ಮೂಲಕ ನಡೆಯುತ್ತಿದೆ. ಮೊಬೈಲ್ ನ ಅವಲಂಬಿತ ಪ್ರಸಕ್ತ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳಿಗೆ ನೆಟ್ವರ್ಕ್ ಅತಿ ಅಗತ್ಯವಾಗಿದೆ. ನೆಟ್ವರ್ಕ್ ಸಮಸ್ಯೆಯಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಯಲ್ಲಿ ನಿಂತು ಪಾಠ ಕೇಳುವುದು, ಕಿ.ಮೀ ಗಟ್ಟಲೆ ಗುಡ್ಡ ಏರಿ ಪಾಠ ಕೇಳುವುದು ಅನಿವಾರ್ಯವಾಗಿದೆ. ಇದನ್ನು ಯಾವ ರೀತಿ ಅಭಿವೃದ್ದಿ ಪಡಿಸಿ ಬೈಂದೂರಿನ ಮೂಲೆ ಮೂಲೆಗೆ ನೆಟ್ ವರ್ಕ್ ದೊರಕುವಂತೆ ಮಾಡಲು ಸಭೆಯಲ್ಲಿ ಚರ್ಚಿಸಿದರು.
ಸಭೆಯ ನಂತರ ಹೊಸದಿಗಂತ ಜೊತೆ ಮಾತನಾಡಿದ ಶಾಸಕ ಸುಕುಮಾರ್ ಶೆಟ್ಟಿಯವರು ಕನ್ವರ್ಷನ್ ಭೂಮಿ ಬೇಕು ಎಂಬ ಕಾರಣಕ್ಕೆ ಹೊಸದಾಗಿ ಟವರ್ ಮಾಡುವಲ್ಲಿ ಕನ್ವರ್ಷನ್ ಜಾಗಗಳ ಸಮಸ್ಯೆ ಎದುರಾಗುತ್ತಿತ್ತು. ಹಾಗಾಗಿ ಅದರಿಂದ ವಿನಾಯತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ (ಸಿಎಸ್) ಮಾತನಾಡಿದ್ದೇನೆ.
ಗ್ರಾಮ ಪಂಚಾಯತ್ NOC ಸಮಸ್ಯೆ ಎದುರಿಸುತಿದ್ದ ಗಂಗೊಳ್ಳಿ, ಕಟ್‌ಬೆಲ್ತೂರು ಪಂಚಾಯತ್ ಪಿಡಿಓಗಳಿಗೆ ಮಾತನಾಡಿದ್ದು, ಸಮಸ್ಯೆ ಬಗೆಹರಿಸಿ ಶೀಘ್ರ ಅನುಮತಿ ನೀಡುವಂತೆ ಸೂಚಿಸಿದ್ದೇನೆ ಎಂದರು.
ಸಭೆಯಲ್ಲಿ ಬಿ.ಎಸ್.ಎನ್.ಎಲ್, ಏರ್ಟೆಲ್, ಸೇರಿದಂತೆ ಎಲ್ಲಾ ಸಿಮ್ ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು