ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ. ವಿ. ಸದಾನಂದ ಗೌಡ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆಯಾಗಲಿದ್ದು, ಕರ್ನಾಟಕದಿಂದ ನಾಲ್ವರು ಸಂಪುಟ ಸೇರಲಿದ್ದಾರೆ ಎಂಬ ಮಾಹಿತಿ ಇದೆ.
ಸಚಿವ ಸದಾನಂದ ಗೌಡ ಅವರು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರಿನ ಉತ್ತರ ಕ್ಷೇತ್ರದ ಸಂಸದರು, ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ಆಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
2004ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುವ ಮೂಲಕ ಸದಾನಂದ ಗೌಡ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದರು.
2014ರಲ್ಲಿ ಮೊದಲ ಬಾರಿ ನರೇಂದ್ರ ಮೋದಿ ಪ್ರಧಾನಿಯಾದಾಗ ಸದಾನಂದ ಗೌಡರಿಗೆ ರೈಲ್ವೆ ಖಾತೆ ನೀಡಲಾಗಿತ್ತು.ಒಂದು ಬಾರಿ ರೈಲ್ವೆ ಬಜೆಟ್ ಸಹ ಮಂಡನೆ ಮಾಡಿದ ಹೆಗ್ಗಳಿಗೆ ಇವರಿಗಿದೆ. ಬಳಿಕ ಕಾನೂನು ಸಚಿವರಾಗಿ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಅನಂತ್ ಕುಮಾರ್ ನಿಧನದ ಬಳಿಕ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಜವಾಬ್ದಾರಿಯನ್ನು ಇವರಿಗೆ ವಹಿಸಲಾಯಿತು. 2019ರಲ್ಲಿ ಜಯಗಳಿಸಿದ ಬಳಿಕ ಮತ್ತೊಂದು ಬಾರಿ ಪ್ರಧಾನಿ ಮೋದಿ ಅವರ ಸಂಪುಟವನ್ನು ಸೇರಿದರು.