ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಭಾಗವತ ಸಂಪ್ರದಾಯದ ಅತೀ ಪ್ರಾಚೀನವಾದ ಬ್ರಹ್ಮಾವರ ಬಳಿಯ ಬಾಳೆಕುದ್ರು ಶ್ರೀ ಮಠ ಋಷಿ ಪರಂಪರೆಯ ಜೊತೆಗೆ ಕೃಷಿ ಪರಂಪರೆಯನ್ನು ಇಂದಿಗೂ ಕೂಡಾ ಮುಂದುವರಿಸಿಕೊಂಡು ಬರುತ್ತಿದೆ. ಇಲ್ಲಿನ ಪರಂಪರೆಯ ಗುರುಗಳಾದ ನೃಸಿಂಹಾಶ್ರಮ ಸ್ವಾಮೀಜಿಯವರು ಮಠದಲ್ಲಿ ಬಂಜರಾಗಿದ್ದ 5 ಎಕ್ರೆ ಕೃಷಿ ಭೂಮಿಯಲ್ಲಿ ಭತ್ತದ ಬೆಳೆಯನ್ನು ತೀರಾ ಆಸಕ್ತಿಯಿಂದ ಮಾಡುತ್ತಿದ್ದಾರೆ.
ಪೂರ್ವಾಶ್ರಮದಲ್ಲಿ ಕೃಷಿ ಕುರಿತು ತೀರಾ ಆಸಕ್ತಿ ಇದ್ದ ನೃಸಿಂಹಾಶ್ರಮ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಠದ ಆವರಣದಲ್ಲಿ 250 ಟ್ರೇಯಲ್ಲಿ ಭತ್ತದ ಬೀಜವನ್ನು ಹಾಕಿ ಮಾಡಲಾದ ಚಾಪೆ ನೇಜಿಯನ್ನು ಬುಧವಾರ ಇಲ್ಲಿನ ಗದ್ದೆಯಲ್ಲಿ ಯಾಂತ್ರಿಕೃತವಾಗಿ ನಾಟಿ ಮಾಡಲಾಯಿತು.
ಕೆಲವು ದಿನದ ಹಿಂದೆ ಟಿಲ್ಲರ್ ಮೂಲಕ ಉಳುಮೆ ಮಾಡಿ ಹದಗೊಳಿಸಿದ ಗದ್ದೆಯಲ್ಲಿ 2 ನಾಟಿ ಯಂತ್ರಗಳಿಂದ ನಾಟಿ ಮಾಡಲಾಯಿತು. ಈ ಸಂದರ್ಭ ಸ್ವತಹ: ಶ್ರೀಗಳು ನಾಟಿ ಮಾಡುವಲ್ಲಿ ಬಂದು ಮಾರ್ಗದರ್ಶನ ನೀಡಿದರು. ಈ ಹಿಂದೆ ಮಾನವ ಆಳುಗಳ ಮೂಲಕ ಮಾಡಲಾಗುತ್ತಿದ್ದ ಭತ್ತದ ನಾಟಿಯನ್ನು ಕಳೆದ 3 ವರ್ಷದಿಂದ ಯಾಂತ್ರೀಕೃತವಾಗಿ ಮಾಡಲಾಗುತ್ತಿದೆ. ಭತ್ತದ ಬೆಳೆಯಿಂದ ಬರುವ ಹುಲ್ಲುಗಳನ್ನು ಇಲ್ಲಿನ ಗೋಶಾಲೆಯಲ್ಲಿ ಇರುವ ದೇಶೀ ತಳಿಗಳ ಗೋವುಗಳಿಗೆ ಬಳಸಲಾಗುತ್ತಿದೆ.
ಕೃಷಿ ಮತ್ತು ಬೇಸಾಯದಲ್ಲಿ ಲಾಭ ನಷ್ಟದ ಲೆಕ್ಕಾಚಾರ ಹಾಕುವ ಇಂದಿನ ದಿನದಲ್ಲಿ ಋಷಿ ಪರಂಪರೆಯ ಮಠವೊಂದು ಕೃಷಿಗೆ ಮಹತ್ವಿಕೆ ನೀಡುತ್ತಿರುವುದು ಮಾದರಿಯಾಗಿದೆ.