ವರದಿ : ಬಿ.ಎಸ್.ಆಚಾರ್ಯ
ಕಾರ್ಕಳ : 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕಾರ್ಕಳದಲ್ಲಿ ನಡೆದಿದ್ದು, ಆರೋಪಿಗಳ ವಿರುದ್ಧ ಫೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಸತೀಶ್(24), ವಿಜಯ(35) ಆರೋಪಿಗಳು.
ತಮಿಳು ನಾಡು ಮೂಲದ ಬಾಲಕಿ, ತಾಯಿ ಮತ್ತು ಮಲತಂದೆಯೊಂದಿಗೆ ವಾಸವಿದ್ದಳು. ಮಲತಂದೆ ಕಿರುಕುಳ ನೀಡುತ್ತಿದ್ದ ಕಾರಣ ಆಕೆ ಗೆಳೆಯನಿಗೆ ಕರೆ ಮಾಡಿ ಆತನೊಂದಿಗೆ 2 ತಿಂಗಳು ವಾಸವಿದ್ದಳು. ಆತನೂ ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಬಂದಿತ್ತು. ತಕ್ಷಣ ಆಕೆಯ ಮನೆಗೆ ಭೇಟಿ ನೀಡಿ, ಸಮಾಲೋಚನೆ ನಡೆಸಿದ್ದು ಆರೋಪಿಗಳ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ದೂರು ನೀಡಿದ್ದರು.
ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ ಠಾಣಾ ಸಬ್ ಇನ್ಸ್ಪೆಕ್ಟರ್ ಮದು. ಬಿ ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಜೇಶ್ . ಪಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಬಾಲಕಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಪಿಲ ಮತ್ತು ಔಟ್ ರೀಚ್ ವರ್ಕರ್ ಸುನಂದಾ ನೊಂದ ಬಾಲಕಿಯನ್ನು ಸಮಾಲೋಚನೆಗೊಳಪಡಿಸಿದರು. ಬಾಲಕಿಗೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ಅವರ ಆದೇಶದಂತೆ ಬಾಲಕಿಯರ ಬಾಲಮಂದಿರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.