ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಡೆಯುವ ಹಡಿಲು ಭೂಮಿ ಕೃಷಿ ಅಂದೋಲನಕ್ಕೆ ಇದೀಗ ತಾರಾ ಮೆರಗು ಬಂದಿದೆ . ಚಿತ್ರ ನಟ, ನಿರ್ದೆಶಕ ಅಲೆವೂರು ಮೂಲದ ರಕ್ಷಿತ್ ಶೆಟ್ಟಿ ಭಾನುವಾರ ವಾರಂಬಳ್ಳಿ ಬಿರ್ತಿ ಹೇಮಾ ಶೆಡ್ತಿ ಅವರ ಮನೆ ಬಳಿಯಲ್ಲಿ ಗದ್ದೆಗೆ ಹಾಲು ಸಮರ್ಪಿಸುವ ಮೂಲಕ ಗದ್ದೆಯಲ್ಲಿ ಇಳಿದು ಕೃಷಿ ಮಾಡಿ ನಾಟಿ ಯಂತ್ರಕ್ಕೆ ನೇಜಿ ನೀಡುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಬಾಲ್ಯದಲ್ಲಿ ತಾನು ಡೈವಿಂಗ್ ಕಲಿತದ್ದು ನಮ್ಮ ಮನೆಯಲ್ಲಿ ಕೃಷಿಯ ನಾಟಿ ಯಂತ್ರದ ಮೂಲಕ ಎಂದರು. ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಒಂದು ಆಲೋಚನೆ ನಮ್ಮ ಶಾಸಕ ರಘುಪತಿ ಭಟ್ ಅವರು ಯುವ ಜನತೆಗೆ ಮತ್ತು ಹೊರ ಜಿಲ್ಲೆ ಮತ್ತು ರಾಷ್ಟ್ರದಲ್ಲಿರುವ ಜನರಿಗೆ ಉತ್ತೇಜನ ನೀಡಿದೆ ಎಂದರು.
ಕೃಷಿ ಆಂದೋಲನಕ್ಕೆ ಸಹಕರಿಸಿದ ಸಂಘ – ಸಂಸ್ಥೆಯವರಿಗೆ, ಭೂ ಮಾಲಕರಿಗೆ, ಸ್ಥಳೀಯರಿಗೆ ಶಾಸಕ ರಘುಪತಿ ಭಟ್ ಅಭಿನಂದನೆ ಸಲ್ಲಿಸಿ ಗೌರವಿಸಿದರು.
ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗುಲಾಬಿ, ನಾನಾ ಗಣ್ಯರಾದ ರಾಜಾ ವಿಜಯ್ ಕುಮಾರ್ , ಹೆಚ್. ಎಸ್. ಶೆಟ್ಟಿ , ರಾಘವ್ ಎಂ. ಶೆಟ್ಟಿ, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ, ಬಿ. ಧನಂಜಯ್, ಹಿರಿಯ ಕ್ಷೇತ್ರಾಧಿಕಾರಿಗಳಾದ ಶಂಕರ್, ಬಿರ್ತಿ ರಾಜೇಶ್ ಶೆಟ್ಟಿ, ಭುಜಂಗ ಶೆಟ್ಟಿ, ಸದಾನಂದ ಪೂಜಾರಿ ಕೇದಾರೋತ್ಥಾನ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.