(ತಂದೆಯ ಜನುಮದಿನದ ಸವಿನೆನಪಿನಲ್ಲಿ ಡಾ. ವೀಣಾ ಬನ್ನಂಜೆ ಬರವಣಿಗೆ)
ಉಡುಪಿಯ ಪಡುಮುನ್ನೂರು ನಾರಾಯಣಾಚಾರ್ಯ ವಂಶದ ಕುಡಿ ಬನ್ನಂಜೆ ಗೋವಿಂದಾಚಾರ್ಯ. ಈ ವಂಶದ ಬೆಳವಣಿಗೆಯೇ ಒಂದು ವಿಶೇಷ ಕಥೆ.ಅಡುಗೆ ಭಟ್ಟರ ಮನೆತನ, ಆಚಾರ್ಯರಾದದ್ದು ಸ್ವಂತ ಪರಿಶ್ರಮದಿಂದ. ಅನಂತ ಭಟ್ಟ ರಾಗಿದ್ದ ಅಜ್ಜ ಅಡುಗೆ ಭಟ್ಟರಿಂದ ಆಚಾರ್ಯರಾದರು. ಅಜ್ಜಿ ಪದ್ಮಾವತಿ ಕೂಡಾ ಸಂಸ್ಕೃತ ಪಂಡಿತೆ. ಅಂಥ ಪರಿಶ್ರಮ ದಾಂಪತ್ಯದ ಫಲ ನಾರಾಯಣ ಆಚಾರ್ಯರು.
ಈ ನಾರಾಯಣ ಮದುವೆ ಆದ ಮರುದಿನ ಮನೆ ಬಿಟ್ಟರು. ಆಗ ಅವರಿಗೆ ಹದಿನಾಲ್ಕು. ಧಾರವಾಡದ ವಿರೂಪಾಕ್ಷ ಶಾಸ್ತ್ರಿಗಳಲ್ಲಿ ತರ್ಕಶಾಸ್ತ್ರ ಕಲಿತು ಮರಳಿದ್ದು ಇಪ್ಪತ್ತಾರಕ್ಕೆ. ಹೊಚ್ಚಹೊಸ ಮದುವೆ ಆದ ಹೆಂಡತಿ ಸತ್ಯಭಾಮೆ ಗೆ ಗಂಡನ ಹನ್ನೆರಡು ವರ್ಷಗಳ ಅಜ್ಞಾತವಾಸ. ಹಾಗೆ ಬಂದವರು ಪಂಡಿತ ಪಡುಮುನ್ನೂರು ನಾರಾಯಣ ಆಚಾರ್ಯರಾಗಿ ಬೆಳೆದರು.
ಅಷ್ಟಮಠದ ಸ್ವಾಮೀಜಿಗಳಿಗೆ ಆಸ್ಥಾನ ವಿದ್ವಾಂಸ. ಮೈಸೂರಿನ ಅರಸರು ಅರಮನೆಗೆ ವಿದ್ವಾಂಸರಾಗಿ ಬನ್ನಿರೆಂದರೆ ಕೃಷ್ಣನನ್ನು ಬಿಟ್ಟು ಬರುವುದಿಲ್ಲ ಎಂದು ಅರಸರ ಗೌರವ ನಿರಾಕರಿಸಿದ ಕೃಷ್ಣ ಭಕ್ತ. ತನಗೆ ದಾನ ಮಾಡಲು ಯಾರಾದರೂ ಬಂದರೆ ನನಗಿಂತ ಅವಶ್ಯಕ ಇರುವವರಿಗೆ ಕೊಡಿ ಎಂದು ಸೌಮ್ಯವಾಗಿ ನಿರಾಕರಿಸುತ್ತಿದ್ದ ನಿಸ್ಪೃಹಿ.
ವ್ಯವಹಾರ ನಿಷ್ಠುರಿ. ತನ್ನ ಹೆಸರಲ್ಲಿ ಹಣ ಕೇಳಿದ ಸಂಬಂಧಿಯನ್ನು ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟು ತನಗೂ ಆ ವ್ಯವಹಾರಕ್ಕೂ ಸಂಬಂಧ ಇಲ್ಲ ಎಂದ ಕಠೋರಿ. ಹೆಂಡತಿಯನ್ನು ಹೃದಯವಂತಿಕೆಯಿಂದ ರೋಗ ದಾಟುವಂತೆ ಮಾಡಿದ ಕರುಣಾಮಯಿ. ಸ್ವಂತ ಮಗ ಹಣ ತೆಗೆದರೆ ಪುಸ್ತಕ ಕೊಳ್ಳುತ್ತಾನೆ ಎಂಬುದನ್ನು ತಿಳಿದು ಸುಮ್ಮನಾದ ವ್ಯವಹಾರ ನಿಪುಣ. ಚಟ ತೀರಿಸಲು ಕಳ್ಳತನ ಮಾಡಿದ ಹುಡುಗನನ್ನು ಹಾಳಾಗಿ ಹೋಗುತ್ತಿ ಎಂದು ಶಪಿಸಿದ ಋಷಿ.
ತನ್ನ ಎಪ್ಪತ್ತರ ದಶಕದ ವಯದಲ್ಲಿ ತಾನೇ ಬಾವಿಗಿಳಿದು ಕಸ ತೆಗೆದ ಧೀರ.ದೇವರಿಗೆ ನೀರು ತರುವಾಗ ಬಿದ್ದು ಕಾಲು ಮುರಿದುಕೊಂಡರೆ, ಚಿಕಿತ್ಸೆಗೆ ಒಪ್ಪದೆ, ತಾನು ಮಾಡಿದ ಯಾವುದೋ ತಪ್ಪಿಗೆ ಈ ಶಿಕ್ಷೆ ಆಗಿದೆ ಅದನ್ನು ಅನುಭವಿಸಿಯೇ ತೀರಬೇಕು ಎಂದ ಹಠವಾದಿ. ಇಂತಹ ಹಲವು ವಿಶೇಷಗಳ ಆಜಾನುಬಾಹು, ಸಂಸ್ಕೃತ ವಿದ್ವಾಂಸ,ತರ್ಕಕೇಸರಿ, ಪಡುಮುನ್ನೂರು ನಾರಾಯಣ ಆಚಾರ್ಯರು.
ಅವರು ಹೆತ್ತ ಹಲವು ಮಕ್ಕಳಲ್ಲಿ ಉಳಿದವರು ಇಬ್ಬರು ರಾಮ ಮತ್ತು ಗೋವಿಂದ. ಅಜ್ಜ ಸಂಪಾದಿಸಿದ ಆಚಾರ್ಯತ್ವ ಅಪ್ಪನಿಂದ ಬೆಳೆಯಿತು.
ಇಂತಹ ಮನೆಯಲ್ಲಿ ಗೋವಿಂದ ಹುಟ್ಟುವ ವೇಳೆಗೆ ನಾರಾಯಣ ಆಚಾರ್ಯರು ಪಡುಮುನ್ನೂರಿನಿಂದ ಬನ್ನಂಜೆಗೆ ಬಂದರು. ನಾಲ್ಕರ ಮಗು ನಸುಕಿನಲ್ಲಿ ಉಷಾಕಾಲದಲ್ಲಿ ಕನಸು ಕಾಣುತ್ತಿತ್ತು. ಮನೆಯ ಪಡಸಾಲೆಯ ಗೋಡೆಗೊಂದು ಪರದೆಯಂಥ ತಡೆ, ಅದರ ಮುಂದೆ ನೀಲವರ್ಣದ ಬಾಲಕೃಷ್ಣ. ಅಮ್ಮ ಕಥೆಯಲ್ಲಿ ಹೇಳಿದ್ದ ನವಿಲುಗರಿ ಮುಡಿಯಲ್ಲಿ . ಕೃಷ್ಣನ ಕೈಯಲ್ಲಿ ಒಂದು ಗುಲಾಬಿಯ ಗಿಡ, ಕೃಷ್ಣ ಹೂವು ತೋರಿ ಮುಳ್ಳನ್ನೂ ಕಾಣಿಸುತ್ತಾನೆ. ನಿದ್ದೆ ತಿಳಿದೆಬ್ಬಿಸುವ ಹೊತ್ತು,ಅಮ್ಮ, ‘ಶ್ರೀ ಹರಿ ಸೇವೆಯ ಧ್ಯಾನದೊಳಿದ್ದೆ ಏತಕೆ ಎಬ್ಬಿಸಿದೆ’ ಎಂದು ಹಾಡುತ್ತಿದ್ದಳು. ಹುಡುಗ “ಅಮ್ಮ, ಕೃಷ್ಣ…ಕೃಷ್ಣ” ಎಂದ. ಅಮ್ಮ ಕಣ್ಣಿಟ್ಟು ಹುಡುಕುವಾಗ ಕೃಷ್ಣ ಹುಡುಗನ ಕಣ್ಣಿಗೂ ಮರೆಯಾದ. ಅಮ್ಮನಿಗೆ ಹೇಳಬಾರದಿತ್ತು ಎಂದು ಹುಡುಗ ಪರಿತಪಿಸಿದ.
ಅಮ್ಮನಿಗೆ ಹುಡುಗ ನಿತ್ಯ ಸಂಜೆಯ ಒಳಗೆ ಮನೆ ಸೇರಬೇಕು. ಹುಡುಗನಿಗೆ ಅಮ್ಮನ ಪ್ರೀತಿ ಭಯವನ್ನು ಬೆಳೆಸಿತು. ಕತ್ತಲಾದರೆ ಮುಸುಕು, ಮುಸುಕು, ಕಿಟಕಿಗೆ ಬಾಗಿಲು. ಹುಡುಗ ಪುಕ್ಕನಾದ. ಒಂದು ದಿನ ಅದನ್ನು ದಾಟಲೆಂದೇ ಹೊರಬಿದ್ದ
ಅಪ್ಪ ಏನೂ ಕಲಿಸಲಿಲ್ಲ. ಆದರೆ ಜೊತೆ ಇದ್ದ ದೊಡ್ಡಪ್ಪ ಹುಡುಗನಿಗೆ ನಾಲ್ಕು ಆಗುವುದರೊಳಗೆ ಹಲವನ್ನು ಕಲಿಸಿದರು. ಬಾಲ್ಯದಿಂದಲೇ ಹುಡುಗನ ನಾಲಿಗೆ ತುಂಬ ಸಂಸ್ಕೃತ. ಆದಿ ಉಡುಪಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಅಲ್ಲಿ ಗಣಿತದಲ್ಲಿ ಗೋವಿಂದನ ಅಸಾಧಾರಣ ಪ್ರತಿಭೆ.”ಬದುಕುವುದಕ್ಕಾಗಿ ತಿನ್ನುವುದೋ ತಿನ್ನುವುದಕ್ಕಾಗಿ ಬದುಕುವುದೋ?” ಎಂದು ಶಾಲೆಯಲ್ಲಿ ಶಿಕ್ಷಕರ ಪ್ರಶ್ನೆಗೆ “ತಿನ್ನುವುದಕ್ಕಾಗಿ ಬದುಕುವುದು” ಎಂಬ ವಿಕ್ಷಿಪ್ತ ಉತ್ತರ ಕೊಟ್ಟ ನಿಜ ಕರ್ಮಸಿದ್ಧಾಂತಿ. ತನ್ನ ಕೈಯಲ್ಲಿ ಏನೋ ಒಂದು ಶಕ್ತಿ ಪ್ರವಹಿಸುತ್ತದೆ ಎಂಬ ಭಾವ ಚಿಕ್ಕಂದಿನಿಂದಲೂ. ಅದಕ್ಕೆ ಸದಾ ಕೈಗಳನ್ನು ಮುಷ್ಟಿಮಾಡಿ ಮುಚ್ಚಿಕೊಳ್ಳುತ್ತಿದ್ದ. ತೆರೆದರೆ ಶಕ್ತಿ ಹರಿದು ಹೋಗುತ್ತದೆ ಎಂಬ ಭಯ.
ಮುಂದೆ ಸಂಸ್ಕೃತ ಶಾಲೆಯಲ್ಲಿ ಪ್ರೌಢ ಶಿಕ್ಷಣ. ಅಲ್ಲಿ ಹತ್ತನೆಯ ತರಗತಿಯಲ್ಲಿ ಮೂರು ಬಾರಿ ಸಂಸ್ಕೃತದಲ್ಲಿ ಪಾಸು ಆದರೆ ಮುಂದಿನ ತರಗತಿ ಪ್ರವೇಶಕ್ಕೆ ಬೇಕಾದ ಅಂಕಗಳಿಲ್ಲ. ಅವನಿಂದ ಪಾಠ ಕೇಳಿ ಬರೆದವರು ಪಾಸಾಗಿ ಮುಂದೆ ಗೋವಿಂದ ಮಾತ್ರ ಹಿಂದೆ. ಅನುತ್ತೀರ್ಣನಲ್ಲ ಆದರೆ ಶೈಕ್ಷಣಿಕ ಮುಂದುವರಿಕೆಗೆ ಅಂಕ ಸಾಲದು. “ಬಹುಶಃ ಗೋವಿಂದ ಬರೆಯುವ ಸಂಸ್ಕೃತ ಮೌಲ್ಯಮಾಪಕರಿಗೆ ತಿಳಿಯದು” ಎಂಬ ಮಾತು ಆಗ ಪ್ರಸಿದ್ಧ ಆಯಿತು. ಹುಡುಗ “ಇನ್ನೆಂದೂ ಶಾಲೆಗೆ ಹೋಗುವುದಿಲ್ಲ, ದೊಡ್ಡ ದೊಡ್ಡ ಶಾಲೆಗೆ ಹೋದವರೆಲ್ಲ ನನ್ನ ಬಳಿ ಬಂದು ಪಾಠ ಕೇಳುವಂತಾಗಬೇಕು” ಎಂದು ಹಠ ತೊಟ್ಟ. ಅಲ್ಲಿಂದ ಸ್ವಾಧ್ಯಾಯ ಆರಂಭಿಸಿದ. ಓದಿನಲ್ಲಿ ಮುಳುಗಿ ಹೋದ.
ಆ ಕಾಲಕ್ಕೆ ಪಲಿಮಾರು ಮಠಾಧೀಶ ವಿದ್ಯಾಮಾನ್ಯ ತೀರ್ಥರ ಶಿಷ್ಯನಾದ. ತಲೆಯಲ್ಲಿ ಜುಟ್ಟು, ಬೈರಾಸಿನ ಕಚ್ಚೆ, ಉತ್ತರೀಯ. ಭಾರೀ ಮಡಿ ಮನೆತನ, ಸಂಪ್ರದಾಯ. ಎಲ್ಲದರ ಒಳಗೆ ವೇದಾಂತ ಓದಿದ. ಎಷ್ಟೋ ಪಾಠ ಗುರುಗಳು ಹೇಳುವ ಮೊದಲೇ ಗೋವಿಂದ ಅವರಿಗೆ ಹೇಳುತ್ತಿದ್ದ. ಹುಡುಗನ ಒಳಗಿನ ಪ್ರತಿಭೆ ತೀರ್ಥರ ಅರಿವಿಗೆ ಬಂದಿತ್ತು. ಅವರು ಮೌನಗರ್ಭದಲ್ಲಿ ಅವನನ್ನು ಬೆಳೆಸುತ್ತಿದ್ದರು. ಗೋವಿಂದ ವಿದ್ಯಾಮಾನ್ಯರ ಪರಮಪ್ರಿಯ ಶಿಷ್ಯನಾದ. ಕೌಮಾರ್ಯದಲ್ಲೇ ತಂತ್ರಸಾರ ಸಂಗ್ರಹ ಅನುವಾದಿಸಿದರೆ, ಬಾಣಭಟ್ಟನ ಕಾದಂಬರಿಯೂ ಕನ್ನಡಕ್ಕೆ ಬಂದಳು. ಆ ಎಳೆವಯಸ್ಸಿನಲ್ಲೇ ಸರ್ವಮೂಲ ಗ್ರಂಥ ಸಂಪಾದಿಸಿದ ವಟು. ಹೀಗೆ ಸಂಸ್ಕೃತ ವೇದಾಂತ ಮತ್ತು ಸಾಹಿತ್ಯ ಎರಡನ್ನೂ ಎಡಬಲದಂತೆ ಈಸಿ ಬೆಳೆಯ ತೊಡಗಿದ ಗೋವಿಂದ.
ಹೊರಗಿನ ವೇಷ ಒಳಗಿನ ನಟನೆ ಇವು ಮಠದ ವಾತಾವರಣದಲ್ಲಿ ಕಾಣಿಸಿದವು. ಹುಡುಗ ಜುಗುಪ್ಸೆಗೊಂಡ. ನುಡಿಗೂ ನಡೆಗೂ ಭೇದ ಕೂಡದೆನಿಸಿತು. ಹೊರಗೆ ಕಾಣುವವ ಹೇಗಿದ್ದರೂ ಒಳಗಿನದು ಸತ್ಯ ಇರಬೇಕು. ಹೊರಗಿನದಕ್ಕೆ ಬೆಲೆ ಕೊಡಕೂಡದು ಒಳಗಿನದೇ ನಿಜ. ಹೊರಗೆ ಹೇಗಿದ್ದರೂ ಮುಖ್ಯ ಅಲ್ಲ ಒಳಗಿನ ಬೆಳಕು ನಿತ್ಯ. ಹೀಗೆ ಒಂದು ವಿಪರೀತ ಸತ್ಯ ಕಣ್ಣಿಗೆ ಹೊಡೆಯುತ್ತಿತ್ತು. ಹುಡುಗ ಜನರಿಗೆ ಇದರ ಅರಿವು ಮುಟ್ಟಿಸಬೇಕು ಎಂದು ಕ್ರಾಂತಿಕಾರಿ ಆದ. ತೋರ್ಪಡಿಕೆಯ ನಾಟಕ ಸಾಕು ನಿಜವಾದ ಒಳಗನ್ನು ತೊಳೆಯಿರಿ. ಒಳಗೆ ಪರಿಶುದ್ಧರಾಗಿ. ಹೊರಗಿನ ಪೋಷಾಕಿಗೆ ಬೆಲೆ ಕೊಡಬೇಡಿ ಎಂದು ತೋರಲು, ಮಡಿವಂತ ಬಟ್ಟೆ ಕಳಚಿದ. ಜುಟ್ಟು ಕತ್ತರಿಸಿ ಕ್ರಾಪ್ ಬಿಟ್ಟ. ಫ್ರೆಂಚ್ ಗಡ್ಡಕ್ಕೆ ಪ್ಯಾಂಟ್ ಶರ್ಟಿನ ಕಾಂಬಿನೇಶನ್. ಬಾಯಿಯಲ್ಲಿ ಸಿಗರೇಟು, ಹೋಟೆಲಿನಲ್ಲಿ ಕಾಫಿ. ಯಾವುದನ್ನೂ ಗೋವಿಂದ ಕದ್ದುಮುಚ್ಚಿ ಮಾಡಲಿಲ್ಲ ಎಲ್ಲ ಬಿಡುಬೀಸು.ಆಚಾರ್ಯರ ಮನೆಯ ಸಂಸ್ಕೃತ ವಿದ್ವಾಂಸರ ಮಗ ಹೀಗಾದ ಎಂದು ಸಮಾಜ ಆಡುತ್ತಿತ್ತು. ಹುಲಿಯ ಹೊಟ್ಟೆಯಲ್ಲಿ ನರಿ ಹುಟ್ಟಿತು ಎಂಬ ಕೀಟಳೆಯ ಮಾತುಗಳೂ ಹುಟ್ಟಿದವು.
ಪಂಡಿತ ನಾರಾಯಣ ಆಚಾರ್ಯರಿಗೆ ಒಳಗಣ್ಣು ಇತ್ತು. ಹುಡುಗನ ಒಳಗೆ ದೊಡ್ಡದು ಬೆಳೆಯುತ್ತಿದೆ ನೋಡಿದರು. ಹುಡುಗನಿಗೆ ಮೊದಲಿಂದ ಹೇಳಿದ್ದು ಒಂದೇ ಮಾತು, ” ನಿನಗೆ ಏನು ಬೇಕು ಹಾಗೆ ಬೆಳೆ, ನಾನು ಸಂಸ್ಕೃತ ಓದಿದೆ ಎಂದು ನೀನು ಓದಬೇಡ. ನಿನಗೆ ಬೇಕಾದರೆ ಇಂಗ್ಲಿಷ್ ಓದು. ಯಾರನ್ನೂ ಪ್ರಶ್ನೆ ಕೇಳಬೇಡ…. ಪ್ರಶ್ನೆ ನಿನ್ನಲ್ಲಿ ಹುಟ್ಟಿದೆ ಆದ್ದರಿಂದ ಉತ್ತರವೂ ನಿನ್ನಲ್ಲೇ ಇದೆ ಹುಡುಕು.” ಹುಡುಗ ಅಪ್ಪನ ಮಾತಿನ ಸೂತ್ರಾರ್ಥ ತಿಳಿದ. ಎಂದೂ ಸೂತ್ರ ತಪ್ಪಲಿಲ್ಲ. ಹಾಗೆಂದು ಹೊರಗಿನ ಅರಿವೆಗೆ ಬೆಲೆ ಕೊಡುವ ನಾಟಕ ಸಾಕು ಒಳಗಿನ ಅರಿವಿಗೆ ಬೆಲೆ ಕೊಡಿ ಎಂಬುದನ್ನು ಸೆಡ್ಡು ಹೊಡೆದು ಸವಾಲು ನೀಡಿದ.
ಅಣ್ಣ ಬನ್ನಂಜೆ ರಾಮಾಚಾರ್ಯರಿಗೂ ತಮ್ಮನ ಬಗ್ಗೆ ಭಾರೀ ಭರವಸೆ. ತಾನು ಸಂಪಾದಿಸಿದ ಪತ್ರಿಕೆಗೆ ಲೇಖನ ಕೊಡುವಂತೆ ಆದೇಶಿಸಿದ. ಈ ಒತ್ತಾಯ ಇಲ್ಲದೇ ಇವನು ಬರೆಯಲಾರ ಎಂದು ಅಣ್ಣನಿಗೆ ಗೊತ್ತಿತ್ತು. ರಾತ್ರಿ ಬೆಳಗಾಗುವುದರೊಳಗೆ ಲೇಖನ ಸಿದ್ಧ ಮಾಡಲೇಬೇಕು ಹಾಗಿತ್ತು ಅಣ್ಣನ ಒತ್ತಾಯ. ಹದಿನೆಂಟರ ಹುಡುಗನ ವೇದಾಂತದ ಬರೆಹ ಕೇವಲ ಉಡುಪಿಯನ್ನು ಮುಟ್ಟಲಿಲ್ಲ, ಹುಡುಗನ ವಿಸ್ತಾರ ರಾಜ್ಯದಾದ್ಯಂತ ಬೆಳೆಯಿತು. ಎಷ್ಟೆಂದರೆ ಆ ಕಾಲಕ್ಕೆ ಮುಖ್ಯಮಂತ್ರಿ ಆಗಿದ್ದ ಕೆಂಗಲ್ ಹನುಮಂತಯ್ಯನವರೇ ಸ್ವತಃ ಅಣ್ಣ ಬನ್ನಂಜೆ ರಾಮಾಚಾರ್ಯರಿಗೆ ಪತ್ರ ಬರೆದು ಹುಡುಗ ಯಾರೆಂದು,ಭೆಟ್ಟಿಯಾಗ ಬೇಕೆಂದು ವಿಚಾರಿಸಿದರು. ಹಾಗೆ ಕೆಂಗಲ್ ಹನುಮಂತಯ್ಯನವರು ಕರೆಸಿಕೊಂಡರು ಕೂಡ.
ಭಾಷಣಕ್ಕೆ ಬನ್ನಿ ಎಂದಾಗಲೂ ನನಗಿಂತ ಗೋವಿಂದ ಚೆನ್ನಾಗಿ ಮಾತಾಡುತ್ತಾನೆ ಎಂದು ಅವನನ್ನೇ ಕರೆಯುವಂತೆ ಹೇಳಿದ ಅಣ್ಣ. ಹೀಗೆ ಬಾಲಪಾಠ ಮಾಡಿಸಿದ ದೊಡ್ಡಪ್ಪ, ಸ್ವತಂತ್ರವಾಗಿ ಬೆಳೆಯಲು ಬಿಟ್ಟು ಪರಮ ಬಂಧನವೊಂದು ಸೆಳೆಯುವಂತೆ ಮಾಡಿದ ಅಪ್ಪ, ಬೆಳವಣಿಗೆಗೆ ಪೋಷಕನಾದ ಅಣ್ಣ-ಎಲ್ಲವೂ ಒದಗಿ ಬಂದಿತ್ತು ಗೋವಿಂದ ಕುಟುಂಬದಲ್ಲಿ.
ಇವೆಲ್ಲದರ ಜೊತೆಗೆ ಶಿಖರಪ್ರಾಯವಾಗಿ ಗೋವಿಂದನ ಬೆನ್ನಿಗಿದ್ದವರು ರಾಘವೇಂದ್ರ ಸ್ವಾಮೀಜಿ.
ಇತ್ತ ಓದು ಬರೆಹ ಅವಿಶ್ರಾಂತ. ಸಾಹಿತ್ಯ ಲೋಕಕ್ಕೆ ಅವನು ಸಾಹಿತಿ. ಕವಿತೆ,ನಾಟಕ, ಲೇಖನಗಳು, ಹೀಗೆ ಅಸಾಧಾರಣ ಪ್ರತಿಭೆ. ಬರೆಹದ ಜೊತೆ ಮಾತನ್ನೂ ನುಡಿಸಲು ಯಾರೋ ಕರೆದರು. ಮಾತಿಗೆ ನಿಂತಾಗ ಓದಿದ್ದು ಮರೆತು ಒಂದೇ ಸಾಲು ಹೇಳಿ ಕುಳಿತ. ಅದು ಅವನ ಪ್ರಥಮ ಭಾಷಣ. ಮಾತಿಗೂ ನೆನಪಿಗೂ ಒಂದು ಎಳೆಯಿದೆ ತಿಳಿದ. ನೆನಪಿನ ಹುಟ್ಟಿನಾಳದಲಿ ಭಗವಂತ ಇರುವುದನ್ನು ಕಂಡ. ಮುಂದೆ ಅಸಾಧಾರಣ ನೆನಪಿಗೇ ಹೆಸರಾದ. ನೆನಪಿಗೆ ಚೀಟಿಯ ಆಲಂಬನ ಬೇಡಲಿಲ್ಲ ಚಿತ್ತದಲ್ಲಿ ಅವನನ್ನೇ ಕರೆದು ನುಡಿದ. ಅಲ್ಲಿಂದ ನುಡಿದದ್ದು ಮಂತ್ರವಾಯಿತು. ಕೇಳಿದವರು ಮಂತ್ರ ಮುಗ್ಧರಾದರು.
ಎಂಭತ್ತರ ದಶಕದಲ್ಲಿ ಅವರ ಮಾತಿಗೆ ಟಿಕೇಟ್ ತೆಗೆದುಕೊಂಡು ಕೇಳುವ ಪ್ರೇಕ್ಷಕರು. ಪ್ರತೀ ನುಡಿಮಂಟಪ ಹೌಸ್ ಫುಲ್. ಎಲ್ಲ ಟಿಕೆಟ್ ಸೋಲ್ಡ್ ಔಟ್. ಹೊರಗಿನ ಆವರಣಗಳಲ್ಲಿ ಕುಳಿತು ಕೇಳುವ ಕೇಳುಗರು.
ಇಷ್ಟರೊಳಗೆ ಬಾಣಭಟ್ಟನ ಕಾದಂಬರಿ ಕನ್ನಡವಾಗಿ ಬೇಂದ್ರೆಯನ್ನೂ ಸೆಳೆದಿತ್ತು. ಆ ಎಳೆವಯಸ್ಸಿನಲ್ಲೇ ಬೇಂದ್ರೆ ಹರಸಿದರು. ‘ಬನ್ನಂಜೆ ನಿಮಗೆ ನಿದ್ರೆ ಆರು ತಾಸು, ಕೆಲಸ ಹದಿನೆಂಟು ತಾಸು. ನಿಮ್ಮಿಂದ ಬಹಳ ದೊಡ್ಡ ಕೆಲಸ ಆಗಲಿಕ್ಕಿದೆ.’ ಅದು ಏನೆಂದು ತಿಳಿಯದ ದಿನ. ಬೇಂದ್ರೆ ಹಲವು ಕವಿಗೋಷ್ಠಿಗೆ, ಕೆಲವು ಸಾಹಿತ್ಯ ಸಭೆಗೆ ತನ್ನ ಬದಲಿಗೆ ಬನ್ನಂಜೆಯನ್ನು ಕರೆಯಿರಿ ಎಂದು ಸೂಚಿಸಿದ್ದರು. ಮುಂದೆ ಬೇಂದ್ರೆಯವರ ನಾಲ್ಕು ತಂತಿಗೆ ನೀವೇ ವ್ಯಾಖ್ಯಾನ ಬರೆಯಿರಿ ಎಂದು ಬೇಂದ್ರೆ ಹೇಳುವವರೆಗೆ ಅವರ ಬಾಂಧವ್ಯ.
ಬಾಲ್ಯದ ದಿನಗಳನ್ನು ಎಲ್ಲ ಸ್ವಾಮೀಜಿಗಳ ಜೊತೆ ಕಳೆದ ಒಡನಾಟ. ಅವರ ಬದುಕು, ಅವರು ತೋರಿದ ಅನುಗ್ರಹ ಎಲ್ಲ ಬನ್ನಂಜೆ ಬೆನ್ನಿಗಿತ್ತು. ಹಲವು ಅವಧೂತ ಸ್ವಾಮಿಗಳೂ ಹರಸಿದ್ದರು. ಮಠದೊಳಗಿದ್ದೂ ಹೊರಗುಳಿದ, ಹೊರಗಿದ್ದಾಗಲೂ ವೇದಾಂತದ ಒಳಗಿದ್ದ.
ಮಾತು ಅಪೂರ್ವ ಇತ್ತು. ವಿಷಯಕ್ಕೆ ಸೀಮೆ ಇರಲಿಲ್ಲ. ಧರ್ಮ, ಜಾತಿ ಭೇದ ಇರಲಿಲ್ಲ. ಕ್ರೈಸ್ತ ಇಸ್ಲಾಂ ಹಿಂದೂ ಧರ್ಮೀಯರೆಲ್ಲರ ಸಭೆಗೂ ಇವರೇ ಅಧ್ಯಕ್ಷ, ಇವರದೇ ಕೊನೆಯ ಮಾತು. ಇವರಾಡಿದ್ದು ಎಲ್ಲರಿಗೂ ತೀರ್ಮಾನ. ಇವರೆಂದೂ ಅವರಿವರೆಂದು ಎರಡು ನುಡಿಯಲಿಲ್ಲ. ನುಡಿಯೆಲ್ಲ ದೇವನಿಗೇ ಒಪ್ಪಿಸಿದ ಅವನ ಪಡಿನುಡಿ. ಆದ್ದರಿಂದಲೇ ಸರ್ವಧರ್ಮ ಸಮ್ಮೇಳನಕ್ಕೆ ಅಧ್ಯಕ್ಷ. ಕಡೆಗೆ ಅಮೆರಿಕದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನಕ್ಕೆ ಭಾರತದ ಪ್ರತಿನಿಧಿ. ಕೇವಲ ನಲುವತ್ತರ ದಶಕದ ವಯದಲ್ಲಿ ಅಮೆರಿಕದಲ್ಲಿ ನುಡಿದು ಬಂದ ವಿವೇಕಾನಂದ.
ಅಂದಿನಿಂದಲೇ ಮನೆಗೆ ಹುಡುಕಿ ಬರಲು ಆರಂಭಿಸಿದ ವಿದೇಶೀ ವಿದ್ಯಾರ್ಥಿಗಳು. ಮನೆಯ ತುಂಬ ಇಂಗ್ಲಿಷ್ನಲ್ಲಿ ಸಂಸ್ಕೃತ , ವೇದಾಂತ ಪಾಠ. ಇದರೊಡನೆ ಹುಲಿ ಸಾಕಿದ ಸಾಹಸವೂ ಇತ್ತು.ಸರ್ಪಕ್ಕೆ ಮಾತಿನ ಸಂದೇಶ ರವಾನಿಸಿ ಅದು ನಮ್ಮನ್ನು ತಿಳಿಯುತ್ತದೆ ಎಂಬುದನ್ನು ತೋರಿದ್ದರು.
ಗೋವಿಂದಾಚಾರ್ಯರ ಇರವು ಮತ್ತು ಹೊರಗಿನ ವಸ್ತ್ರ ವಿನ್ಯಾಸ ನೋಡಿ ಮಡಿವಂತರಿಗೆ ಕೋಪ. ಸಾಹಿತಿಗಳಿಗೆ ವೇದಾಂತಿ ಎಂಬ ಮಡಿವಂತಿಕೆ. ಸಾಹಿತಿಗಳಿಗೆ ಮಡಿಯ ಅಂತರ ವೇದಾಂತಿಗಳಿಗೆ ಮೈಲಿಗೆಯ ಆಶೌಚ. ಇಬ್ಬರಿಗೂ ಹೆದರದ ನಿಸ್ಸೀಮ ನಡೆ ಇವರದು. ಇವರು ಸತ್ಯಕ್ಕಾಗಿ ನುಡಿವವರು,ನಡೆಯುವವರು, ಬದುಕುವವರು, ಹೆಸರು, ಹಣ, ಪ್ರತಿಷ್ಠೆಗೆ ಅಲ್ಲ ಎಂದು ಜನ ತಿಳಿಯಿತು. ಅಷ್ಟರಲ್ಲಿ ಹುಡುಗ ಗೋವಿಂದ, ಬನ್ನಂಜೆ ಗೋವಿಂದಾಚಾರ್ಯ ಆಗಿ ಬಿಟ್ಟಿದ್ದರು. ಗುರುಗಳು ವಿದ್ಯಾವಾಚಸ್ಪತಿ ಎಂದು ಹರಸಿದರು. ಅವರಾಗಲೇ ಸತ್ಯದ ಮಡಿಲ ಶಿಶು. ಯಾರಿಗೂ ಹೆದರಲಿಲ್ಲ,ದೊಡ್ಡವರ ಮುಂದೆ ಬೀಗಲಿಲ್ಲ, ಅವಮಾನ, ಅನುಮಾನಗಳಿಗೆ ಬಾಗಲಿಲ್ಲ.
ಚಿಕ್ಕ ವಯಸ್ಸಿನಲ್ಲೇ ಸರ್ವಮೂಲ ಗ್ರಂಥ ಸಂಪಾದನೆಯ ಭಾರೀ ಜವಾಬ್ದಾರಿ. ನೀರು ಊಟ ಬಿಟ್ಟು ಚಿಮಿಣಿ ದೀಪದ ಕೆಳಗೆ ಚಾಪೆಯ ಮೇಲೆ ಕುಳಿತು ಬರೆದರು. ಹಳೆಯ ತಾಡವಾಲೆಯ ಅಕ್ಷರ ಓದುತ್ತಾ , ಸತ್ಯ ಹುಡುಕುತ್ತಾ, ಶ್ರೀಮಾನ್ ಮಧ್ವಾಚಾರ್ಯರ ಕಾಣ್ಕೆಗೆ ಕಣ್ಣಾದರು. ಅವರನ್ನು ಹುಡುಕುತ್ತಾ ತನ್ನನ್ನು ಕಂಡರು. ತನ್ನನ್ನು ಕಾಣುತ್ತಾ ಅವರಿಗೇ ಅರ್ಪಿಸಿಕೊಂಡರು. ಶ್ರೀಮದಾಚಾರ್ಯರ ಸತ್ಯ ಹೇಳುವ ಆನಂದಕ್ಕೆ ಹಿಗ್ಗಿದರು. ಅವರು ಆನಂದ ತೀರ್ಥರ ಒಳಗಿದ್ದರು, ತೀರ್ಥ ಎಲ್ಲ ಆನಂದವಲ್ಲ ಎಂಬ ನಿಷ್ಠುರ ಸತ್ಯವನ್ನೂ ಹೇಳಿದರು.
ಇಷ್ಟು ಹೆಸರು ಮಾಡುವ ಹೊತ್ತಿಗೆ ಆಚಾರ್ಯರು ಮಲಗಿ ಬಿಟ್ಟರು. ಏಳಲಾಗದ ಬೆನ್ನು ನೋವು. ಆಚಾರ್ಯರ ಗತಿ ಮುಗಿಯಿತು ಇನ್ನು ನಾವೇ ಎಂದವರುಂಟು ಅವರ ಕೈಯಲ್ಲೇ ಬೆಳೆದವರು. ಮಲಗಿದಲ್ಲಿ ಅಧ್ಯಯನ, ದೇವಮಂತ್ರ ಎಲ್ಲವೂ ಅವಿರತವಿತ್ತು. ಆರು ತಿಂಗಳಿಗೂ ಮಿಕ್ಕು ಆಚಾರ್ಯರು ಮಲಗಿದಲ್ಲೇ. ಆಗ ಅವರ ಎಲ್ಲ ಸೇವೆ ಮಗುವಿನಂತೆ, ಪೂರ್ಣ ಪರಾವಲಂಬಿ. ಆಚಾರ್ಯರು ವರುಷದೊಳಗೆ ಎದ್ದರು ಬೆಳೆದರು,ಬೆಳೆಸಿದರು. “ನಿಮ್ಮನ್ನು ಶತಾಯಗತಾಯ ಮುಗಿಸಲು ಪ್ರಯತ್ನ ನಡೆದಿದೆ. ಆದರೆ ನಿಮ್ಮ ಹಿಂದೆ ಭಾರೀ ಕಾಯುವ ರಾಯರಿದ್ದಾರೆ” ಎಂದು ಒಬ್ಬರು ಅವಧೂತರು ನುಡಿದಿದ್ದರು.
ಸರ್ವಮೂಲ ಗ್ರಂಥದ ಪ್ರತಿಯೊಮ್ಮೆ ಮನೆಯಿಂದ ನಾಪತ್ತೆ ಆಯಿತು. ಊರೆಲ್ಲ ಆಚಾರ್ಯರನ್ನು ಆಡಿಕೊಂಡಿತು. “ವಿದೇಶೀಯರಿಗೆ ಡಾಲರಿಗೆ ಮಾರಿದ್ದಾನೆ” ಪುಸ್ತಕ ಇಲ್ಲವಾಗಿ ಬನ್ನಂಜೆ ಉತ್ತರಿಸುವಂತಿರಲಿಲ್ಲ. ಹುಡುಕಾಟ ಕೈಮೀರಿ, ದೇವ ಚಿತ್ತಕ್ಕೆ ಸಮರ್ಪಿಸಿ ಆಚಾರ್ಯರು ಕುಳಿತರು. ಮುಂದೊಂದು ದಿನ ಅಂಜನದಲ್ಲಿ ರಾಯರು ಪುಸ್ತಕ ತೋರಿದರು.ಅದು ಅವರು ತೋರಿದ ಸ್ಥಳದಲ್ಲೇ ಒಂದು ದಿನ ಆಕಸ್ಮಿಕವಾಗಿ ಆಚಾರ್ಯರ ಕೈಗೆ ಸಿಕ್ಕಿತು. ಶ್ಯಮಂತಕ ಮಣಿಯ ಅಪವಾದ ಕಳೆದು ಪರಿಶುದ್ಧನಾದ ಕೃಷ್ಣ- ಗೋವಿಂದ.
ಒಂದು ದಿನ ಸಂಗ್ರಹ ರಾಮಾಯಣದ ತನ್ನದೇ ಪುಸ್ತಕ ಬಿಡುಗಡೆ. ಅತಿಥಿಗಳಾರು ಎಂದರು ವ್ಯವಸ್ಥಾಪಕರು. ಅದು ಅವನ ಪುಸ್ತಕ ಅವನೇ ಅತಿಥಿ ಬೇರೆ ಬೇಡ ಎಂದಿದ್ದರು ಆಚಾರ್ಯರು.ಕಪಿಯೊಂದು ಬಂದು ಅತಿಥಿಯಾಗಿ ಪುಸ್ತಕದ ಪುಟ ತೆರೆಯಿತು. ಸಂಜೆ ಆರರ ಮೇಲೆ ಕಪಿ ತಿರುಗಾಡುವುದೇ ವಿಸ್ಮಯ. ಅಂಥಲ್ಲಿ ಬಂದ ಪ್ರೇಕ್ಷಕರನ್ನು ಕಾಡದೇ ಆಚಾರ್ಯರ ಪಕ್ಕ ಕುಳಿತು, ಪುಸ್ತಕ ತೆರೆದು, ಉಪನ್ಯಾಸ ಮುಗಿಯುವವರೆಗೆ ಉಪಸ್ದಿತ. ಇದು ಹನುಮ ಕೃಪೆ ಎಂದು ಮನದಲ್ಲೇ ಕೈಮುಗಿದರು ಆಚಾರ್ಯರು. ಈ ಘಟನೆಯಿಂದ ಆಚಾರ್ಯರನ್ನೇ ಜನರು ದೊಡ್ಡದು ಮಾಡಿದರೆ, ಆಚಾರ್ಯರು ಬೀಗಲಿಲ್ಲ ಅವನಿಗೆ ಬಾಗಿದರು.
ಕಾಲಾನಂತರದಲ್ಲಿ ಜನ ಅವರನ್ನು ಪಂಥಕ್ಕೆ ಕಟ್ಟಿದರು. ಪಂಥದ ಒಳಗೇ ಕೆಲವರು ಮೆಟ್ಟಿದರು, ಕೆಲವರು ಎತ್ತಿದರು. ಬನ್ನಂಜೆ ಯಾರಿಗೂ ಹಿಗ್ಗಲಿಲ್ಲ,ಯಾವುದಕ್ಕೂ ಕುಗ್ಗಲಿಲ್ಲ, ಸತ್ಯ ನಿತ್ಯ ಸಂಗಾತಿ. ಹಲವು ಅಪವಾದ, ಕುಹಕದ ಮಾತುಗಳಿಗೆ ಘನಮೌನಿ. ಸತ್ಯದ ಜೊತೆ ಅವಿರತ ಸಂವಾದ. ಭಗವಂತನ ಜೊತೆ ಮಾತಾಡುವವ ಲೋಕಕ್ಕೆ ನಿರಂತರ ಮೌನಿ.
ಪದವಿ ಓದದ ಹುಡುಗ ಪದವೀಧರರಿಗೆ ಪಾಠ ಹೇಳಿದರು. ಓದು ಮೆಟ್ರಿಕ್ ಗೆ ನಿಲ್ಲಿಸಿದ ಬನ್ನಂಜೆ ಉದಯವಾಣಿ ದಿನಪತ್ರಿಕೆಗೆ ಸಂಪಾದಕರಾದರು. ಪತ್ರಿಕೆಯಲ್ಲೂ ಸತ್ಯದ ಜೊತೆ ಒಪ್ಪಂದವಿಲ್ಲದ ನೈಷ್ಠುರ್ಯ. ಹಲವು ಸತ್ಯಗಳು ಪ್ರಕಟವಾಗದೇ ಇವರನ್ನು ದಾಟಲಿಲ್ಲ. ಹಾಗೆ ಸತ್ಯದ ಮುಖಾಮುಖಿಯಿಂದ ಮಠ, ಸಾಹಿತಿ ಹಲವರ ವಿರೋಧ ಎದುರಾದರೂ ಸತ್ಯ ಮರೆಯಾಗಲು ಬಿಡಲಿಲ್ಲ. ಹಲವರನ್ನು ಕಳಕೊಂಡರೂ ಸತ್ಯದ ಕೈಬಿಡಲಿಲ್ಲ.
ವಾತ್ಸ್ಯಾಯನನ ಕಾಮ ಸೂತ್ರದ ವ್ಯಾಖ್ಯಾನವನ್ನು ರತಿವಿಜ್ಞಾನದಲ್ಲಿ ಬರೆದು ತೋರುವುದು ಒಳಗೆ ಪರಿಶುದ್ಧ ಇದ್ದವನಿಗೆ ಮಾತ್ರ ಸಾಧ್ಯ. ಕೊಳಕು ಮನಸಿನ ಕಳ್ಳನಿಗಲ್ಲ. ಮುಚ್ಚುಮರೆಯಲ್ಲಿ ಕಾಮಕೇಳಿ ಆಡುವ ಅಧೀರನಿಗೂ ಸಲ್ಲ.
ಜಿ. ವಿ ಅಯ್ಯರರಂತಹ ಅಪೂರ್ವ ನಿರ್ದೇಶಕರ ಮೂಲಕ ಆಚಾರ್ಯ ತ್ರಯರನ್ನು ಸಿನೆಮಾ ಮೂಲಕ ಕಾಣಿಸಿದರು. ಭಗವದ್ಗೀತೆಗೆ ಮನೋವೈಜ್ಞಾನಿಕ ವಿವರಣೆಯ ಚಿತ್ರ ಕಥೆ ಬರೆದು ಅದನ್ನು ಜೀವಿ ಅಯ್ಯರ್ ನಿರ್ದೇಶಿಸಿದರು. ಹೀಗೆ ಅಪರಿಮಿತ ಕಲಾಪ್ರಜ್ಞೆ, ಕಲಾಪ್ರೇಮಿ, ಸ್ವತಃ ಚಿತ್ರ ಕಲಾವಿದ. ಬಹಳಷ್ಟು ಕಾಲ ಚಿತ್ರ ಬರೆದು ವೇದಾಂತದ ಸೆಳೆತದಲ್ಲಿ ಮುಳುಗಿ ಉಳಿದದ್ದು ಮರೆತಂತೆ ಕುಳಿತ ಮೌನಿ. ಎಡ ಬಲ ಭೇದವಿಲ್ಲದೆ ಎರಡೂ ಕೈಗಳಲ್ಲಿ ಬರೆಯಬಲ್ಲ ಪ್ರತಿಭಾನ್ವಿತ. ಅಂಗೈಯ ಸ್ಪರ್ಶದಿಂದ ಹಲವರ ರೋಗ ನಿವಾರಿಸಿದ ಧನ್ವಂತರಿ.
ನಿವೃತ್ತಿಯ ಬಳಿಕ ನಿರಂತರ ಪ್ರವಚನ. ಕರ್ನಾಟಕದಾದ್ಯಂತ ವೇದಾಂತ ಪ್ರವಚನ. ಮನೆಮನೆಗಳಲ್ಲಿ ಪ್ರಸಿದ್ಧಿ. ‘ಆಚಾರ್ಯರು ಪ್ರವಚನ ಮಾಡುವ ಹೊತ್ತು ರಾಯಚೂರಿನಲ್ಲಿ ಕಳ್ಳರು ಮನೆ ಲೂಟಿ ಹೊಡೆಯುತ್ತಿದ್ದರು’ ಎಂಬ ಮಾತಿತ್ತು. ಅಂದರೆ ಮನೆಗೆ ಮನೆಯೇ ಬೀಗ ಹಾಕಿ ಪ್ರವಚನಕ್ಕೆ ಹೋಗುತ್ತಿದ್ದರು. ಹೀಗೆ ಬೆಳೆದ ಪ್ರವಚನ ಮಾತಾಗದೇ ಮಂತ್ರವಾಗಿ ಹಲವರನ್ನು ಬೆಳೆಸಿತು.
ಆಚಾರ್ಯರ ಸುತ್ತು ಗುಂಪು ಬೆಳೆಯಿತು. ಗುಂಪೊಂದು ಹಿಂಬಾಲಿಸಿತು ಎಂದರೆ ವಿರೋಧಿ ಗುಂಪು ಹುಟ್ಟಿತು ಎಂದರ್ಥ. ಬನ್ನಕ್ಕೆ ಅಂಜೆ ಅದೇ ಬನ್ನಂಜೆ ಎಂದು ಶಬ್ದ ನಿಷ್ಪತ್ತಿ ಹೇಳಿದ್ದ ಬನ್ನಂಜೆ ಅದಕ್ಕೆಲ್ಲ ಅಲುಗಲಿಲ್ಲ.
ಕಟ್ಟಿಕೊಂಡವರನ್ನು ತಲೆಯಲ್ಲಿ ಹೊತ್ತು ತಿರುಗಲಿಲ್ಲ. ಸಾಧ್ಯ ಆದಷ್ಟು ಕಟೆದರು, ತಿದ್ದಿದರು, ಒರೆದರು. ವಿರೋಧ ಗುಂಪಿಗೆ ತಲೆಕೆಡಿಸಿ ಕೊಳ್ಳದೆ ಅವರಾಗಿ ಬಂದರೆ ಆರ್ದ್ರವಾಗಿ ಸ್ವೀಕರಿಸುತ್ತಿದ್ದರು. ಬಾರದವರ ಕುರಿತು ದ್ವೇಷವಿಲ್ಲ.
ತನ್ನ ಇಪ್ಪತ್ತೈದರ ವಯದಲ್ಲಿ ಆಗೀಗ ಉಪನ್ಯಾಸ ನೀಡುತ್ತಿದ್ದರು.
ತೊಂಬತ್ತನಾಲ್ಕರಿಂದ ಆ ವಾಗ್ಯಜ್ಞ ಸತತ ಕಾಲು ಶತಮಾನ ನಿರಂತರ ನಡೆಯಿತು. ತನ್ನನ್ನು ತಾನೇ ಆಹುತಿ ಕೊಟ್ಟು ಭಗವದರ್ಪಣೆ ಮಾಡಿದ ಆತ್ಮಯಜ್ಞ. ಅದಕ್ಕೆ ಫಲದ ಆಶೆಯಿಲ್ಲ, ಯಾರನ್ನಾದರೂ ಹುಟ್ಟಿಸುವ ಹಂಬಲವಿಲ್ಲ, ಇನ್ನೊಬ್ಬರನ್ನು ಬೆಳೆಸುವ ಹಸಿವಿಲ್ಲ. ಶುದ್ಧ ಪರಿಪೂರ್ಣ ಪಡೆದದ್ದನ್ನು ನೀಡಿದವನಿಗೇ ಪುನರರ್ಪಣೆ ಮಾಡುವ ಧೀಮಂತ ಯಜ್ಞ. ನುಡಿಯಾಚೆಗಿನ ಮೌನ ಏಕಾಂತದಲ್ಲಿ ಅವನು,ಅವನು,ಅವನು ಮಾತ್ರ. ಹಲವು ಗೌರವ ಅರಸಿ ಬಂತು. ಕೆಲವು ಬಿರುದುಗಳಿಂದ ಗುರುತಿಸಿದರು. ಆದರೆ ” ಚೆನ್ನಾಗಿ ಓದಿದ್ದಿ, ನನಗೆ ಸಂತೋಷ ಆಗಿದೆ, ಇನ್ನಷ್ಟು ಬೆಳೆ” ಎಂದು ಹರಸಿದ ತನ್ನ ತಂದೆಯ ಮಾತನ್ನೇ ಪರಮ ಪಾರಿತೋಷಕ ಎಂದು ಶಿರದಲ್ಲಿ ಧರಿಸಿದರು. ಗುರು ವಿದ್ಯಾಮಾನ್ಯರು ಕೊಟ್ಟ ವಿದ್ಯಾವಾಚಸ್ಪತಿಯನ್ನು ಹೃದಯದಲ್ಲಿ ಇಟ್ಟರು.
ಮನೆಯನ್ನು ಮಕ್ಕಳನ್ನು ಎಂದೂ ಕಟ್ಟಿಕೊಂಡವರಲ್ಲ. ತನ್ನ ಅಪ್ಪ ಕೊಟ್ಟ ಸ್ವಾತಂತ್ರ್ಯವನ್ನು ತನ್ನ ಮಕ್ಕಳಿಗೂ ಕೊಟ್ಟು ದೂರ ಉಳಿದ ನಿರಾಳ. ಮನೆಯ ಒಳಗೇ ಇದ್ದು ಮನೆಗೇ ಅಂಟಿಕೊಳ್ಳದ ನಿಸ್ಸಂಸಾರಿ. ಮನೆಯನ್ನು ಗೋವಿಂದ ನಿಲಯ, ಬನ್ನಂಜೆ ಸದನ ಎಂದು ಕರೆಯಬಹುದಾದ ಆತ್ಮರತಿಗೆ ಒಲಿಯದೆ ಈಶಾವಾಸ್ಯಂ ಎಂದು ಹೆಸರಿಸಿ ಭಗವಂತನ ಮನೆ ಎಂದು ಬದುಕಿದ ಅನಿಕೇತ. ತಾನು ಎಪ್ಪತ್ತೈದರ ವರೆಗೂ ತನ್ನ ತಾಯಿಯ ಹೆಸರಿನಲ್ಲಿ ಇದ್ದ ಮನೆಯನ್ನು ತನ್ನ ಹೆಸರಿಗೆ ಪರಿವರ್ತಿಸದೇ ಯಾರದೋ ಮನೆಯಲ್ಲಿ ಇದ್ದಂತೆ ಬದುಕಿದ ಪರದೇಶಿ.
ಮಗ ಕೋಮಾದಲ್ಲಿ ಗಂಭೀರ ಇದ್ದಾಗ ಪ್ರಾರ್ಥಿಸಿ ಎಂದರೆ, “ಶಿಷ್ಯ ಹೀಗೆ ಗಂಭೀರ ಇದ್ದ ಅವನಿಗಾಗಿ ಭಗವಂತನೊಡನೆ ಜಗಳಾಡಿದ್ದೆ. ಶಾಂತನಾಗು ನಿನ್ನ ಹುಡುಗ ಆರಾಮಾಗುತ್ತಾನೆ ಎಂದು ಭಗವಂತ ಕಿವಿಯಲ್ಲಿ ನುಡಿದ. ಅದರ ಮರುದಿನ ಹುಡುಗ ಉಷಾರಾದ ಮನೆಗೆ ಮರಳಿದ. ಈಗ ಇವನದು ದೇವಚಿತ್ತ” ಎಂದು ಕೈಚೆಲ್ಲಿದ ದೇವಶಿಶು. ಒಂದನ್ನು ಕೇಳಿದ್ದಕ್ಕೆ ಇನ್ನೊಂದನ್ನು ಭಗವಂತನಿಗೇ ಅರ್ಪಿಸಿದ ಸಮರ್ಪಕ.ಮಗ ಮುಂದೆ ನಡೆದು ತಾನು ಹಿಂದುಳಿಯ ಬಾರದು ಎಂಬಂತೆ ಅವನ ಸಪಿಂಡೀಕರಣದ ಮಂತ್ರಾಕ್ಷತೆಗೆ ಮುನ್ನ ನಡೆದ ಧೀಮಂತ.
ಕಳೆದ ವರುಷದ ಡಿಸೆಂಬರ್ ಹದಿಮೂರರ ದಿನ “ನಿನ್ನ ಕೈಯಲ್ಲಿ ಅಮೃತ ಸ್ನಾನ ಆಯ್ತಲ್ಲ ಇನ್ನು ಆ ಸ್ನಾನ ಇದ್ದೇ ಇದೆ”. “ಇನ್ನು ಕೆಳಗೆ ಇಳಿಯುವುದು ಚೆಂದ ಅಲ್ಲವೇ?” “ಮೈಯ ಮೇಲಿನ ಎಲ್ಲಾ ಬಟ್ಟೆ ಕಳೆದು ಬಿಳೀ ಬಟ್ಟೆ ಹೊದೆಯಿಸು” ಎಂದೆಲ್ಲ ಸಾವಿನ ಪೂರ್ವ ಸೂಚನೆ ನೀಡುತ್ತಾ, “ಮನೆಯ ನಂಬರ್ ಸಿಗುತ್ತಿಲ್ಲ ಈ ಮನೆ ಅಲ್ಲ ಆ ಮನೆ ನಂಬರ್ ” ಎಂಬ ಕೊನೆಯ ಮಾತನ್ನು ನಗುತ್ತಾ ಹೇಳಿ ಹತ್ತೇ ನಿಮಿಷದಲ್ಲಿ ಮನೆ ಸೇರಿದ ಧೀರ. ನಾನು ಸೇರಬೇಕಾದ ಮನೆ ನನಗೆ ಗೊತ್ತು ಎಂಬ ಸೂಚನೆ. ಸಿಕ್ಕ ಮೇಲೆ ಇರುವುದಿಲ್ಲ ಎಂಬುದನ್ನು ಸೂಚಿಸಿ ಹೋಗುವ ಎದೆಗಾರಿಕೆ. ಸಿಕ್ಕಿತು ಎಂದು ಹತ್ತೇ ನಿಮಿಷದಲ್ಲಿ ನಡೆದು ತೋರಿದ ಇಚ್ಛಾಮರಣಿ.
“ಬನ್ನಂಜೆಯವರು ಹೋಗಿಲ್ಲ ಅವರೀಗ ದೇವಲೋಕದಲ್ಲಿ ಇದ್ದರೆ ಬೃಹಸ್ಪತಿಗಳು ಅವರೊಂದಿಗೆ ಚರ್ಚಿಸುತ್ತಿರುತ್ತಾರೆ. ವೈಕುಂಠದಲ್ಲಿ ಇದ್ದರೆ ನಾರದರು ಅವರನ್ನು ಮಾತಾಡಿಸುತ್ತಿರುತ್ತಾರೆ. ಅವರು ಬ್ರಹ್ಮ ಲೋಕದಲ್ಲಿ ಇದ್ದರೆ ಸಾಕ್ಷಾತ್ ಸರಸ್ವತಿ ಅವರ ಜೊತೆ ಮಾತಾಡುತ್ತಿರುತ್ತಾಳೆ” ಎಂಬ ಅವಿಸ್ಮರಣೀಯ ನುಡಿಮುತ್ತಿನ ಹಾರ ತೊಡಿಸಿದವರಿದ್ದಾರೆ.
“ಇರವು ಸಂಪತ್ತಲ್ಲ ಇರವಿನ ಅರಿವು ಸಂಪತ್ತು”
“ನಾನು ಹೆಣ್ಣಿನಲ್ಲಿ ವೇದಾಂತ ಕಂಡೆ ; ವೇದಾಂತದಲ್ಲಿ ಹೆಣ್ಣನ್ನು ಕಂಡೆ”
“ದೇವರನ್ನು ನಂಬುವವರಿಗೂ ಅವನು ಗೊತ್ತಿಲ್ಲ
ನಂಬದವರಿಗೂ ಅವನು ಗೊತ್ತಿಲ್ಲ
ಇಬ್ಬರಿಗೂ ಗೊತ್ತಿಲ್ಲ ಎನ್ನುವುದೇ ಅರ್ಹತೆ”
ಇವು ಅವರ ಮಾತಿನ ಧಾಟಿ.
ಎಲ್ಲ ಕುರುಹು ಲಾಂಛನಗಳನ್ನು ದಾಟಿದ ಬನ್ನಂಜೆ ಗೋವಿಂದಾಚಾರ್ಯರ ಎಂಬತ್ತೈದನೆಯ ಹುಟ್ಟಿದ ದಿನ ಆಗಸ್ಟ್ ೩. (ನಕ್ಷತ್ರಕ್ಕನುಗುಣವಾಗಿ ಅಲ್ಲ) ಈ ದಿನಕ್ಕೆ ಇದು ಅಪ್ಪನಿಗೆ ಅರ್ಪಿಸುವ ಪದಪುಷ್ಪ. ಬೇರಿನ ಕುರಿತು ಎಲೆ ಮಾತಾಡೀತೇ? ಸಾಗರದಾಳ ನದಿ ಹೇಳಬಹುದೇ? ಉಪ್ಪಿನ ರುಚಿ ಸಮುದ್ರಕ್ಕೇನು ಗೊತ್ತು?
- ವೀಣಾ ಬನ್ನಂಜೆ